

ಬೇಲೂರು: ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ಕಲಿಕಾ ಹಬ್ಬ ಆಚರಿಸುತ್ತಿರುವುದು ಉತ್ತಮ ನಡೆಯಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಯ್ಯ ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಮನ್ವಯಾಧಿಕಾರಿ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ, ನಾರ್ವೆ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ನಾರ್ವೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಕೌಶಲ ಆಧಾರಿತ ಕಲಿಕೆ, ವೈಜ್ಞಾನಿಕ ಕಲಿಕೆ ಮತ್ತು ಮಾಡಿ ಕಲಿ ತತ್ವದ ಆಧಾರದ ಮೇಲೆ ಕಲಿಕಾ ಹಬ್ಬ ಆಚರಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿ ಅವರಿಗೆ ಹೆಚ್ಚಿನ ಅರಿವು ಮೂಡಿಸುವಲ್ಲಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಉಪ ಪ್ರಾಂಶುಪಾಲ ಶಿವಕುಮಾರ್, ಕಾಫಿ ಬೆಳೆಗಾರ ಎನ್.ಎಂ.ಶಿವಪ್ರಸಾದ್, ಎಸ್‌ಎಸ್‌ಡಿಎಂಸಿ ಅಧ್ಯಕ್ಷ ಪಾಪು, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ, ಸದಸ್ಯರಾದ ಮಾಲಾಶ್ರೀ, ಮಲ್ಲಿಕಾರ್ಜುನ, ವೀಣಾ, ಚಿದಾನಂದ್, ಪಿಡಿಒ ಚಂದ್ರಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಲಾವಣ್ಯ, ಲಕ್ಷ್ಮೀನಾರಾಯಣ, ಶೈಲಜಾ, ಮುಖ್ಯ ಶಿಕ್ಷಕ ಸೈಯದ್ ಖಾಲಿಲ್ ಇತರರಿದ್ದರು.