ಮಕ್ಕಳ ಬೆಳವಣಿಗೆ ಪಾಲಕರ ಜವಾಬ್ದಾರಿ:ಡಿಸಿ ಅತುಲ್

2508-Kpl-Ravi-6
Published on

ಕೊಪ್ಪಳ: ಶಾಲಾ ಪೂರ್ವ ಶಿಕ್ಷಣ ಹಂತದಲ್ಲಿನ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು, ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.


ತಾಲೂಕಿನ ಕೋಳೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಕರ ನಡೆ-ಅಂಗನವಾಡಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಶಾಲಾ ಪೂರ್ವ ಶಿಕ್ಷಣ ಪಡೆಯುವ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಬೇಕಾದ ವ್ಯವಸ್ಥೆಯನ್ನು ಅಂಗನವಾಡಿಗಳಲ್ಲಿ ಕಲ್ಪಿಸಲಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರತಿ ದಿನ ಅಂಗನವಾಡಿಗೆ ಕಳುಹಿಸಬೇಕು. ಅಂಗನವಾಡಿಗಳಲ್ಲಿ ಸಿಗುವ ಸಾಮಾನ್ಯ ಜ್ಞಾನದಿಂದ ಮಕ್ಕಳ ಬೌದ್ಧಿಕ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದರು.


ಚಿಣ್ಣರು ಹೂಗುಚ್ಛ ನೀಡಿ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದರು. ಮಕ್ಕಳೊಂದಿಗೆ ಕುಳಿತು ಆ ಮಕ್ಕಳ ಓದು, ಬರಹ, ವಿವಿಧ ಶಾಲಾ ಚಟುವಟಿಕೆಗಳನ್ನು ಡಿಸಿ ಗಮನಿಸಿದರು. ಮಕ್ಕಳೊಂದಿಗೆ ಆಟವಾಡಿದರು. ಮಕ್ಕಳು ಮಾಡಿಕೊಟ್ಟ ಚಹಾ ಸವಿದರು. ಶಾಲಾ ಪೂರ್ವ ಕಾರ್ಯಕ್ರಮ ಅನುಷ್ಠಾನ, ಪಾಲಕ, ಪೋಷಕರ ಸಹಭಾಗಿತ್ವ ಮತ್ತು ಅಂಗನವಾಡಿ ಸೇವೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಗಂಗಪ್ಪ ಅವರೊಂದಿಗೆ ಚರ್ಚಿಸಿದರು.


ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್., ಕಲಿಕಾ ಟಾಟಾ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಅಶೋಕ್, ಜಿಲ್ಲಾ ಸಂಯೋಜಕ ಸಿದ್ದಪ್ಪ ಕುರಿ, ವಲಯ ಮೇಲ್ವಿಚಾರಕಿಯರಾದ ಪ್ರೀತಿ ಕೋರೆ, ಗಾಯತ್ರಿ, ಸುಮಂಗಲಾ ಸಜ್ಜನ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net