

ತುಮಕೂರು: ವಿದ್ಯಾರ್ಥಿಗಳು ಓದು ಮುಗಿಸಿದ ನಂತರವೂ ಅವರ ಕಷ್ಟ, ಸುಖಗಳಿಗೆ ಸ್ಪಂದಿಸಿ, ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಹೃದಯದಲ್ಲಿರುವ ಪ್ರೀತಿಯ ಮೇಷ್ಟ್ರು ನಾಡೋಜ ಬರಗೂರು ರಾಮಚಂದ್ರಪ್ಪ ನಾಡಿನ ಹೆಮ್ಮೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಬಣ್ಣಿಸಿದರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಾಡೋಜ ಪ್ರೊ.ಬರಗೂರು ಸ್ನೇಹ ಬಳಗ ಹಮ್ಮಿಕೊಂಡಿದ್ದ ಬರಗೂರು ಮೀಮಾಂಸೆ ಮತ್ತು ಬರಗೂರರಿಗೆ ತವರು ಜಿಲ್ಲೆಯ ಗೌರವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಷ್ಟೇ ಸಿಮೀತವಾಗದೆ, ಅದರ ಆಚೆಗೂ ಶಿಷ್ಯರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿರುವ ಕೆಲವೇ ಶಿಕ್ಷಕರಲ್ಲಿ ರಾಮಚಂದ್ರಪ್ಪ ಅವರು ಪ್ರಮುಖರು ಎಂದರು. ಹಂಪಿ ಕನ್ನಡ ವಿವಿ ಬರಗೂರು ರಾಮಚಂದ್ರಪ್ಪ ಅವರಿಗೆ ನಾಡೋಜ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚುವಂತೆ ಮಾಡಿದೆ. ಅವರು ಹಂಪಿ ವಿವಿ ಕುಲಪತಿಗಳಾಗಬೇಕು ಎಂಬುದು ನಮ್ಮ ಬಯಕೆಯಾಗಿತ್ತು. ಆದರೆ ನಾಡೋಜ ಮೂಲಕ ನಮ್ಮ ಆಸೆ ಈಡೇರಿದೆ. ಗ್ರಾಮೀಣ ಭಾಗದಿಂದ ಬಂದ ನನ್ನಂತಹ ಅನೇಕ ವಿದ್ಯಾರ್ಥಿಗಳಲ್ಲಿದ್ದ ಕೀಳಿರಿಮೆಯನ್ನು ಹೋಗಲಾಡಿಸಿ, ಅವರಲ್ಲಿ ಆತ್ಮಸ್ಥೆ$ರ್ಯ ತುಂಬುವಲ್ಲಿ ಬರಗೂರು ರಾಮಚಂದ್ರಪ್ಪ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ.ಅರುಣ ಜೋಳದ ಕೂಡ್ಲಗಿ ಮಾತನಾಡಿ, ಬರಗೂರು ಅವರ ಇದುವರೆಗಿನ ಬರಹ, ಮಾತು ಮತ್ತು ಸಿನಿಮಾಗಳನ್ನು ಗಮನಿಸಿದರೆ ಎಲ್ಲದರಲ್ಲಿಯೂ ಪ್ರಜಾಪ್ರಭುತ್ವ ಮತ್ತು ಸಮಸಮಾಜದ ತುಡಿತ ಕಾಣಬಹುದು. ಆದರೆ ಕಸಾಪ ಸಿದ್ಧಮಾದರಿಯನ್ನು ಮುರಿದು ಬಂಡಾಯವೆನ್ನುವ ಹೊಸ ಮಾದರಿ ಹುಟ್ಟು ಹಾಕಿದ ಪರಿಣಾಮದಿಂದಾಗಿ, ಬರಗೂರರ ಬಂಡಾಯ ಸಾಹಿತ್ಯ ಹೆಚ್ಚು ಚರ್ಚೆಗೆ, ವಿಮರ್ಶೆಗೆ ಒಳಪಡಲಿಲ್ಲ ಎನಿಸುತ್ತಿದೆ. ಕಾಗೇಯ ಕಣ್ಣಿನಲ್ಲಿಯೂ ಕಾರುಣ್ಯವನ್ನು ಕಂಡುವರು ಬರಗೂರು. ಹಾಗಾಗಿ ಬರಗೂರರ ಸಮಗ್ರ ಸಾಹಿತ್ಯವನ್ನು ಮರುವಿಮರ್ಶೆಗೆ
ಒಳಪಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಬರಗೂರು ರಾಮಚಂದ್ರಪ್ಪ ಅವರು ಆಡಳಿತ ವರ್ಗದಲ್ಲಿ ಗುರುತಿಸಿಕೊಂಡಾಗಲೂ ಒಂದು ವಿಷಯದ ಬಗ್ಗೆ ಇರುವ ಭಿನ್ನತೆಯನ್ನು ನೇರವಾಗಿ ವ್ಯಕ್ತಪಡಿಸಿದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಆಯಾಯ ಕಾಲಘಟ್ಟದ ಎಲ್ಲ ಘಟನಾವಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ಬರಹ ಅಥವಾ ಭಾಷಣದ ಮೂಲಕ ವ್ಯಕ್ತಪಡಿಸುತ್ತಲೇ ಬಂದಿರುವುದನ್ನು ಕಾಣಬಹುದು. ಯಾವುದಕ್ಕೂ ರಾಜೀ ಮಾಡಿಕೊಂಡವರಲ್ಲ. ಜಾತಿಯ ಹೋರಾಟಗಳಿಗೆ ಬೆಂಬಲ ನೀಡುತ್ತಲೇ ಜಾತ್ಯಾತಿತವಾಗಿ ಬರೆದಂತೆ, ಬದುಕುತಿದ್ದಾರೆ ಎಂದರು. ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಮಗೂ ಬದುಕಿನ ಪಾಠ ಕಲಿಸಿದ ಗುರುಗಳು, ಅವರ ಸಂಘಟನೆ, ಹೋರಾಟದ ಬದುಕು ನನ್ನಂತಹ ಅನೇಕರಿಗೆ ಸ್ಫೂರ್ತಿ. ಮೇಷ್ಟ್ರು ಅವರ ಪತ್ನಿ ರಾಜೇಶ್ವರಿ ಅವರ ಬಗ್ಗೆ ಇರುವ ಗೌರವ ಭಾವನೆ, ಪುರಾಣದ
ನಾಯಕರನ್ನು ಮೀರಿಸುವಂತಹದ್ದು ಎಂದರು.
ಕರ್ನಾಟಕ ಲೇಖಕಿಯರ ಬಳಗದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಪ್ರಭುತ್ವದೊಂದಿಗೆ ಗುರುತಿಸಿಕೊಂಡರೂ, ಅವರೊಂದಿಗೆ ಶಾಮೀಲಾಗದೆ ಸದಾ ಭಿನ್ನವಾಗಿಯೇ ಗುರುತಿಸಿಕೊಂಡಿರುವ ಅವರ ಅಕ್ಷರ ಅರಿವು ಇತರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹದ್ದು ಎಂದರು.
ನಿವೃತ್ತ ಡಿಡಿಪಿಯು ಕೆ.ದೊರೆರಾಜು ಮಾತನಾಡಿ, ನಾಡಿನ ಸಾಕ್ಷಿ ಪ್ರಜ್ಞೆ ಬರಗೂರು ರಾಮಚಂದ್ರಪ್ಪ ಅವರಿಗೆ ತವರಿನ ಗೌರವ ಮಾಡಬೇಕೆಂಬುದು ನಮ್ಮಂತಹ ಅನೇಕರ ಬಹುದಿನದ ಕನಸು ಇಂದು ಈಡೇರಿದೆ. ಬರಗೂರರ ಸಮಾನತೆ ಮತ್ತು ಪ್ರಜಾಪ್ರಭುತ್ವ ಎರಡು ವಿಷಯಗಳಲ್ಲಿ ಇರುವ ಜೀವಪರ ಸಲೆ ದೊಡ್ಡದು. ಧರ್ಮ, ಜಾತಿಯ ಹೆಸರಿನಲ್ಲಿ ಕ್ರೌರ್ಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಇಂದಿನ ಕಾರ್ಯಕ್ರಮ ಪರ್ಯಾಯ ಆಲೋಚನಾ ದಾರಿಯೊಂದನ್ನು ತೋರಿಸಿದೆ. ಗಾಂಧಿ ಹುಟ್ಟಿದ ನಾಡು ಎನ್ನುತ್ತಲೇ ದೌರ್ಜನ್ಯ, ದಬ್ಬಾಳಿಕೆ ಮೀತಿ ಮೀರಿದ್ದು, ಬರಗೂರರ ಬರಹಗಳಲ್ಲಿನ ಮಾನವೀಯ ನೆಲೆಗಳು, ಇದರ ವಿರುದ್ದ ಹೋರಾಡಲು ಹೊಸದಿಕ್ಕು ತೋರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ, ಕೆ.ಎಸ್.ಸಿದ್ಧಲಿಂಗಪ್ಪ, ಬಾ.ಹ.ರಮಾಕುಮಾರಿ, ಡಾ.ಓ.ನಾಗರಾಜು, ಎಚ್.ಗೋವಿಂದಯ್ಯ ಮತ್ತಿತರರು ಇದ್ದರು.