ಮಕ್ಕಳು ಸೈನಿಕರಾಗಲು ಪಾಲಕರು ಬಯಸಲ್ಲ

27 CRP 02
Published on

ಚನ್ನರಾಯಪಟ್ಟಣ: ಸರ್ಕಾರಿ ಉನ್ನತ ಹುದ್ದೆಗಳನ್ನು ಅರಸುವ ಪಾಲಕರು ತಮ್ಮ ಮಕ್ಕಳು ದೇಶ ಕಾಯುವ ಸೈನಿಕರಾಗಬೇಕೆಂದು ಬಯಸುವುದಿಲ್ಲ ಎಂದು ನಿವೃತ್ತ ಸೈನಿಕ ಚಿರಂಜೀವಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಮೂಕಿಕೆರೆ ಗ್ರಾಮದಲ್ಲಿ ಯುವ ಸಾಮ್ರಾಜ್ಯ ಸಂಘ ಹಾಗೂ ಅದೃಶ್ಯ ತಂಡದ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ಒಂದೇ ಮಾತರಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಡಿಯಲ್ಲಿ ನಿಂತು ದೇಶವನ್ನು ಕಾಯುವುದೆಂದರೆ ಒಂದು ರೋಮಾಂಚನ ಸಂಗತಿ. ಆದರೆ ಅಷ್ಟೇ ಅಪಾಯಕಾರಿ ಸನ್ನಿವೇಶಗಳು ಆಗಾಗ್ಗೆ ಎದುರಾಗುತ್ತವೆ. ಅಂತಹ ಸಮಯದಲ್ಲಿ ಎದೆಗೆ ಎದೆ ಕೊಟ್ಟು ನಿಂತು ಹೋರಾಡಬೇಕು. ಮಡಿದರೆ ಈ ಮಣ್ಣಿನ ಋಣ ತೀರಿಸಿದ ಪುಣ್ಯ ನಮ್ಮದಾಗಲಿದೆ ಎಂದರು.

ಯುವ ಸಾಮ್ರಾಜ್ಯ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಮಲ್ಲೇಶ್ ಮಾತನಾಡಿ, ದೇಶ ಕಾಯುವ ಸೈನಿಕ ಹಾಗೂ ದೇಶಕ್ಕೆ ಅನ್ನ ನೀಡುವ ರೈತ ಈ ಸಮಾಜದ ಎರಡು ಕಣ್ಣುಗಳಿದ್ದಂತೆ. ರೈತ ಹಾಗೂ ಸೈನಿಕ ಕೈಕಟ್ಟಿ ಕುಳಿತರೆ ದೇಶ ಉಳಿಯುವುದಿಲ್ಲ ಎಂದರು.

ಮೂಕಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪಾಠಶಾಲೆಯ ಕಟ್ಟಡಗಳಿಗೆ ಸತತ 2 ದಿನಗಳ ಕಾಲ ಶ್ರಮಿಸಿ ಬಣ್ಣ ಬಳಿದು ದೇಶ ಹಾಗೂ ಗ್ರಾಮೀಣ ಬದುಕಿನ ಸಂಸ್ಕೃತಿಯ ಚಿತ್ರಗಳನ್ನು ಬಿಡಿಸಿದ 52 ಕಲಾವಿದ ಶಿಬಿರಾರ್ಥಿಗಳನ್ನು ಸನ್ಮಾನಿಸಲಾಯಿತು. ಜತೆಗೆ ನಿವೃತ್ತ ಸೈನಿಕರಾದ ಚಿರಂಜೀವಿ, ರಂಗಸ್ವಾಮಿ, ಪತ್ರಕರ್ತರಾದ ಕೆ.ಪಿ.ಪುಟ್ಟರಾಜ್ ಹಾಗೂ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಅವರನ್ನು ಅಭಿನಂದಿಸಲಾಯಿತು. ಬಳಿಕ ಯುವ ಸಾಮ್ರಾಜ್ಯ ಹಾಗೂ ಅದೃಶ್ಯ ತಂಡದ ಶಿಬಿರಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಸಿಕೊಟ್ಟರು.

ಶಾಲಾ ಮುಖ್ಯಶಿಕ್ಷಕ ಶ್ರೀಕಾಂತ್, ಯುವ ಸಾಮ್ರಾಜ್ಯದ ಪದಾಧಿಕಾರಿಗಳಾದ ಪುನೀತ್, ಜಿತೇಶ್, ಬಸವರಾಜ್, ಅಜಯ್, ಬಸವೇಗೌಡ, ಅದೃಶ್ಯ ತಂಡದ ಮುಖ್ಯಸ್ಥ ಮಧುಸೂದನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net