ಮಕ್ಕಳ ಪ್ರತಿಭೆ ಹೊರಹಚ್ಚಲು ಸೂಕ್ತವೇದಿಕೆ

24rajesh2
Published on

ಚಾಮರಾಜನಗರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಚ್ಚಲು ಆಹಾರ ಮೇಳ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ ಎಂದು ಸೇವಾ ಭಾರತಿ ಆಂಗ್ಲ ನರ್ಸರಿ ಶಾಲೆ ಮುಖ್ಯಶಿಕ್ಷಕಿ ನಂದಿನಿ ತಿಳಿಸಿದರು.

ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಸೇವಾಭಾರತಿ ಆಂಗ್ಲ ನರ್ಸರಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಆಹಾರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸಲು ವಿಶೇಷವಾಗಿ ಒಲೆ ರಹಿತ ಅಡುಗೆ ತಯಾರಿಸುವ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ವಿದ್ಯಾರ್ಥಿಗಳು ಹಸಿ ಪದಾರ್ಥಗಳಿಂದಲೇ ವಿಭಿನ್ನವಾಗಿ ಆಹಾರ ಪದಾರ್ಥಗಳನ್ನು ತಯಾರಿ ಮಾಡುವ ಮೂಲಕ ಗಮನಸೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವುದೇ ಸ್ಪರ್ಧೆಯಾದರೂ ಸೋಲು-ಗೆಲುವು ಮುಖ್ಯವಲ್ಲ, ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರು ಸ್ಪರ್ಧಿಸುವ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಸಾಂಸ್ಕೃತಿಕ ಮತ್ತು ಇನ್ನಿತರೆ ಕಲೆಗಳ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆಹಾರ ಮೇಳ ಸ್ಪರ್ಧೆಯಲ್ಲಿ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ವೇಳೆ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿ ರಮೇಶ್, ಶಿಕ್ಷಕಿ ಆರ್.ಎಸ್.ಪಲ್ಲವಿ, ಶಿಲ್ಪಶ್ರೀ, ಮಂಜುಳಾ, ಆಶಾ, ತೇಜಸ್ವಿನಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net