ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯ

01b
Published on

ರಾವಂದೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ಶಿಕ್ಷಕರು ಮತ್ತು ಪಾಲಕರ ಕರ್ತವ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜು ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ದೊಡ್ಡಬೇಲಾಳು ಕ್ಲಸ್ಟರ್‌ನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರೊನಾದಿಂದಾಗಿ ಸಾಕಷ್ಟು ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಟಿತವಾಗಬಾರದೆಂಬ ಉದ್ದೇಶದಿಂದ ವಿದ್ಯಾಗಮ ತದನಂತರ ಪ್ರಸ್ತುತ ವರ್ಷದಲ್ಲಿ ಕಲಿಕಾ ಚೇತರಿಕೆ ವರ್ಷವನ್ನಾಗಿ ಆಚರಿಸಸಲಾಗುತ್ತಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಪಾಲಕರಿಗೆ ಕಲಿಕಾ ಚೇತರಿಕೆ ಅರಿವು ಕಡಿಮೆ ಇದ್ದು, ನಮ್ಮ ಮಕ್ಕಳಿಗೆ ಪುಸ್ತಕವಿಲ್ಲದೆ ಯಾವರೀತಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುತ್ತಾರೆ ಎಂಬ ಪ್ರಶ್ನೆ ಪೋಷಕರಲ್ಲಿ ಗೊಂದಲವನ್ನುಂಟು ಮಾಡಿದೆ. ಗೊಂದಲ ಪರಿಹರಿಸಲು ಭಾರತ ಸರ್ಕಾರವು ಕಲಿಕಾ ಚೇತರಿಕೆ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಕ್ಕಳಿಗೆ ಹಲವಾರು ಚಟುವಟಿಕೆಗಳ ಮೂಲಕ ವಿನೂತನವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದೆ. ಈ ಕಾರ್ಯಕ್ರಮವು ಕರ್ನಾಟಕದಲ್ಲಿ ಯಶಸ್ವಿಗೊಳ್ಳುವ ಮೂಲಕ ಮಕ್ಕಳ ಪ್ರಗತಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆಗೆ ಪೂರಕವಾಗಿ ಕಲಿಕಾ ಹಬ್ಬವನ್ನು ಎರಡು ದಿನಗಳ ಕಾಲ 4 ಹಂತಗಳಲ್ಲಿ ಆಯೋಜಿಸಲಾಗುತ್ತಿದ್ದು, ಮಕ್ಕಳಲ್ಲಿ ಸುಪ್ತವಾಗಿರುವ ಹಲವಾರು ಚಟುವಟಿಕೆಗಳನ್ನು ಹೊರಹೊಮ್ಮಿಸಲು ಅತ್ಯಂತ ಸಹಕಾರಿಯಾಗಿದೆ ಎಂದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಜಯ್ಯ ಮಾತನಾಡಿ, ಯಾವುದೇ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಾನದಂಡದಿಂದ ಶಿಕ್ಷಣ ಇಲಾಖೆಯು ಈ ವಿನೂತನವಾದ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಇದನ್ನು ಯಶಸ್ವಿಗೊಳಿಸುವಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂದರು.

ಗ್ರಾ.ಪಂ. ಅಧ್ಯಕ್ಷೆ ಸೈಯದ್‌ಜವೇರಿಯಾ, ಉಪಾಧ್ಯಕ್ಷೆ ಗಾಯತ್ರಿ, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್, ಗ್ರಾಮಸ್ಥರಾದ ಗುರುಮೂರ್ತಿ, ಲಕ್ಷ್ಮಿಕಾಂತ್‌ರಾಜೇಅರಸ್, ದೇವೇಂದ್ರ, ರಾಮಕೃಷ್ಣ, ಕೃಷ್ಣಮೂರ್ತಿ, ಅನುಸೂಯ, ಸುಬ್ರಮಣ್ಯ ರಾಜೇಅರಸ್, ಕಾಂತ್‌ರಾಜೇಅರಸ್, ಸಿಆರ್‌ಪಿ ನಟರಾಜು, ಸಂಪನ್ಮೂಲ ವ್ಯಕ್ತಿಗಳಾದ ಸವಿತಾ, ಸುರೇಶ್, ಸಂತೋಷ್, ಮಂಜುಳಾ, ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮನೋಹರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net