

ಸರಗೂರು: ಗ್ರಾಮೀಣ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಕ್ಲಸ್ಟರ್ ಮಟ್ಟದ ಯೋಜನಾಧಿಕಾರಿ ಚಂದ್ರಶೇಖರ್ ಹೇಳಿದರು.
ತಾಲೂಕಿನ ಎಂಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಗುಂಡಿ ಹಾಡಿಯ ವಾಲ್ಮೀಕಿ ಆಶ್ರಮ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎಂಸಿ ತಳಲು ಕ್ಲಸ್ಟರ್ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.
ಮಕ್ಕಳಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಿದಾಗ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಲಿದೆ. ಇದು ಸಾಧನೆ ಮಾಡಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ಉತ್ತೇಜನ ನೀಡುವುದೇ ಕಾರ್ಯಕ್ರಮ ಆಯೋಜನೆಯ ಪ್ರಮುಖ ಆಶಯ. ಹಾಗಾಗಿ ಮಕ್ಕಳು ವಿದ್ಯಾರ್ಜನೆಗೆ ಸೀಮಿತವಾಗಬಾರದು ಎಂದು ತಿಳಿಸಿದರು.
ರಾಜ್ಯ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಿ.ಕೆಂಪರಾಮಲಿಂಗೇಗೌಡ ಮಾತನಾಡಿ, ಪ್ರಸ್ತುತ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ. ಜೀವನದಲ್ಲಿ ಅಳವಡಿಕೊಳಬೇಕಾದ ರೀತಿ ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.
ಪರೀಕ್ಷಾ ಮತ್ತು ಅಂಕಕ್ಕಾಗಿ ಮಾತ್ರ ಅಧ್ಯಯನ ಸಿಮೀತವಾಗುತ್ತಿದ್ದು, ವಿದ್ಯಾರ್ಥಿಗಳು ಆ ಮಿತಿಯನ್ನು ದಾಟಿ ಜ್ಞಾನಕ್ಕಾಗಿ ಓದು ಎಂಬ ನಿಟ್ಟಿನಲ್ಲಿ ಬೆಳೆಯಬೇಕು. ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕಿಂತ ಆಂಗ್ಲ ಮಾಧ್ಯಮದ ವ್ಯಾಸಂಗವೇ ಶ್ರೇಷ್ಠ ಎಂಬ ಲೋಕದಿಂದ ಹೊರಬಂದು ನಮ್ಮತನ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜು ಎ.ಬಂಡಳ್ಳಿ, ಬಡಗಲಪುರ ಪ್ರೌಢಶಾಲೆ ಮುಖ್ಯ ಶಿಕ್ಷಕ ವಿಜಿ, ಕಾರ್ಯಕ್ರಮ ಆಯೋಜಕ ಅಶೋಕ್, ವಿವಿಧ ಶಾಲೆಯ ಶಿಕ್ಷಕರರಾದ ರೊಹಿತ್, ಅಶೋಕ್, ಶಾಂತಮ್ಮ, ನೇತ್ರಾವತಿ, ನಾಗೇಶಮೂರ್ತಿ, ಪ್ರವೀಣ್, ವಸಂತಾ, ಬಸಪ್ಪ, ಅತಿಥಿ ಶಿಕ್ಷಕರಾದ ಮದನ್, ಸಿದ್ದರಾಜು, ಚೆಲುವರಾಜು, ಶೈಲಾಜಾ, ಸಿದ್ದರಾಜು ಇತರರಿದ್ದರು.