

ಆಳಂದ: ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಕ್ಕಂತಾಗುತ್ತದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್ ಹೇಳಿದರು.
ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಸಂವರ್ಧಿಸುವ ನಿಟ್ಟಿನಲ್ಲಿ ಡಾ.ಬಸವರಾಜ ಪಾಟೀಲ್ ಸೇಡಂ ಅವರು ಶ್ರಮಿಸುತ್ತಿದ್ದಾರೆ. ಕಳೆದ 5 ದಶಕಗಳಿಂದ ನಿರಂತರ ಕಾರ್ಯಕ್ರಮ ಆಯೋಜಿಸಿ ಈ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಹೇಳಿದರು.
ಸಂಸ್ಥೆ ಆಡಳಿತಾಧಿಕಾರಿ ಡಾ.ರಾಘವೇಂದ್ರ ಚಿಂಚನಸೂರ, ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ. ಅಶೋಕರೆಡ್ಡಿ, ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯೆ ಜ್ಯೋತಿ ವಿಶಾಕ್, ಪ್ರಮುಖರಾದ ಮಲ್ಲಿನಾಥ ತುಕ್ಕಾಣೆ, ಮಲ್ಲಿಕಾರ್ಜುನ ಬುಕ್ಕೆ, ರಾಜಕುಮಾರ ಚಿಚಕೋಟೆ, ಶರಣಬಸಪ್ಪ ಶಿರೂರೆ, ಸಿದ್ದಾರಾಮ ಧೋತ್ರೆ, ಶಶಿಕಾಂತ ಭೂಸುಣಗೆ, ಸಂತೋಷ ಕುಲಕರ್ಣಿ, ದತ್ತಾತ್ರೇಯ ಬಿರಾದಾರ ಇತರರಿದ್ದರು.
ಪಟ್ಟಣ ಸೇರಿ ಗ್ರಾಮೀಣ ಭಾಗದ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಭಜನಾ ಮಂಡಳಿಗಳ ಯುವಕ, ಯುವತಿಯರು ಪಾಲ್ಗೊಂಡಿದ್ದರು.