ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

12 Aurad 1
ಔರಾದ್‌ನಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭದಲ್ಲಿ ಶಾಸಕ ಪ್ರಭು ಚವ್ಹಾಣ್ ಮಕ್ಕಳನ್ನು ಸನ್ಮಾನಿಸಿದರು. ಪ್ರಕಾಶ ರಾಠೋಡ್, ಜೋಯಲ್ ಜಯರಾಜ, ದಯಾನಂದ ಘೂಳೆ, ಸುಧಾರಾಣಿ ನಾಯ್ಕ ಇತರರಿದ್ದರು.
Published on

ಔರಾದ್: ಪ್ರತಿ ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಶಿಕ್ಷಣ, ಮನರಂಜನೆ ಹಾಗೂ ಕೌಶಲ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಜತೆಗೆ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರುತ್ತದೆ. ಇದರೊಂದಿಗೆ ಹೊಸದಾದ ಜೀವನ ಕೌಶಲ ಹೊಂದಬಹುದಾಗಿದೆ ಎಂದರು.

ಗಡಿ ಭಾಗದಲ್ಲಿ ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸಿದರೂ ಸಹ ಸಿಬ್ಬಂದಿ ಅದನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಶಾಲಾ ಪ್ರಾರಂಭೋತ್ಸವದಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳಿಗೆ ಹಾಗೂ ಪಾಲಕರಿಗೆ ಸರ್ಕಾರಿ ಶಾಲೆಯ ಹಾಗೂ ಶಿಕ್ಷಣದ ಕುರಿತು ತಿಳಿ ಹೇಳಿ ಶಾಲಾ ದಾಖಲಾತಿ ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ, ಶಾಲೆಯಲ್ಲಿ ಸ್ವಚ್ಛತೆ, ಆಟದ ಮೈದಾನ ಶುದ್ಧ ಕುಡಿಯುವ ನೀರು ಸೇರಿಮೂಲ ಸೌಕರ್ಯ ಕಲ್ಪಿಸಲು ಸದಾ ಬದ್ಧನಾಗಿರುವೆ. ತಾಲೂಕಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ನನ್ನ ಧ್ಯೇಯವಾಗಿದೆ ಎಂದು ಹೇಳಿದರು.

ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರವಾಗಿ ಕುಸಿದಿದ್ದು, ಸುಧಾರಣೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಮಕ್ಕಳ ಕಲಿಕಾ ಪ್ರಗತಿಗೆ ಇಲಾಖೆ ಯೋಜನೆ ರೂಪಿಸಬೇಕು. ಕೆಲ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಲ್ಲದಿದ್ದರೂ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಅಂತಹ ಶಾಲೆ ಶಿಕ್ಷಕರಿಗೆ ಬೇರೆಡೆ ನಿಯೋಜನೆ ಮಾಡುವಂತೆ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ ನಾಯ್ಕ ಮಾತನಾಡಿ, ಶಿಕ್ಷಣದ ಮೂಲ ಉದ್ದೇಶ ಕೇವಲ ಓದು, ಬರಹ ಕಲಿಸುವುದು ಮಾತ್ರವಲ್ಲ. ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ನಿರಂತರವಾಗಿ ಪ್ರೋತ್ಸಾಹಿಸುವುದಾಗಿದೆ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ ರಾಠೋಡ್, ದೈಹಿಕ ಶಿಕ್ಷಣ ಪರಿವೀಕ್ಷಕ ಜೋಯಲ್ ಜಯರಾಜ, ಪಪಂ ಸದಸ್ಯ ದಯಾನಂದ ಘೂಳೆ, ಸಂತೋಷ ಪೋಕಲವಾರ, ಸಂಜುಕುಮಾರ ವಡಿಯಾರ, ಗುಂಡಪ್ಪ ಮುದಾಳೆ, ಮುಖಂಡರಾದ ಶಿವರಾಜ ಅಲ್ಮಾಜೆ, ಕೇರಬಾ ಪವಾರ್, ನೋಡಲ್ ಅಧಿಕಾರಿ ಸಂಜಯ ಮೇತ್ರೆ, ವಿಶ್ವನಾಥ ಬಿರಾದಾರ, ಬಸವರಾಜ ಪಾಟೀಲ್, ವಿಜಯಕುಮಾರ ನುದನೂರೆ, ಶಿಕ್ಷಕ ಬಾಲಾಜಿ ಅಮರವಾಡಿ, ಮಹಾದೇವ ಘೂಳೆ, ಬಲಭೀಮ ಕುಲಕರ್ಣಿ, ವೆಂಕಟ ಔತಾಡೆ, ರಮೇಶ ಢೋಣೆ ಇತರರಿದ್ದರು.

ವಿವಿಧ ಶಾಲೆಯಿಂದ ಸುಮಾರು ೩೮ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ ೮೦ ಸಾವಿರ ರೂ. ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net