ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಿಕಾ ಹಬ್ಬ ವೇದಿಕೆ

14BTP01
ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಚಪ್ಪರದಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಗಣ್ಯರು ಉದ್ಘಾಟಿಸಿದರು.
Published on

ಬೆಟ್ಟದಪುರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವುದಕ್ಕೆ ಕಲಿಕಾ ಹಬ್ಬದಂತಹ ಕಾರ್ಯಕ್ರಮಗಳು ಹೆಚ್ಚು ಪೂರಕವಾಗಿವೆ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೆಗೆ ಆಯೋಜಿಸಿದ್ದ ಚಪ್ಪರದಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಪ್ರಶ್ನೆ ಮಾಡುವ, ವೈಜ್ಞಾನಿಕ ಮನೋಭಾವ ವೃದ್ಧಿಯ ಜತೆಗೆ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡುವುದರ ಜತೆ ಎಲ್ಲರೊಂದಿಗೆ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಯೋಜಿಸಲಾಗಿದೆ. ಮಕ್ಕಳು ಇದರ ಪೂರ್ಣ ಲಾಭ ಪಡೆಯಬೇಕು ಎಂದರು.

ಹಾರನಹಳ್ಳಿ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಕೆ.ಸಿ ಸತೀಶ್ ಮಾತನಾಡಿ, ಕಲಿಕೆ ಎನ್ನುವುದು ನಿರಂತರತೆಯ ಗುಣ ಹೊಂದಿದೆ. ಇದು ವೃತ್ತಿ, ಜ್ಞಾನ ಸೇರಿದಂತೆ ಮಾನವ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಾಲಾ ಹಂತದಲ್ಲಿ ಸಿಗುವಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಲಿಕಾ ಹಬ್ಬದ ಹಿನ್ನೆಲೆಯಲ್ಲಿ ಗಟ್ಟಿ ಓದು, ಕಥೆ ಹೇಳುವುದು, ಕೈ ಬರಹ, ಸಂತೋಷದಾಯಕ ಗಣಿತ, ಜ್ಞಾಪಕ ಶಕ್ತಿ ಚಟುವಟಿಕೆ, ರಸಪ್ರಶ್ನೆ ಸ್ಪರ್ಧೆ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕ್ರೀಡೆಯನ್ನು ಆಡಿಸಲಾಯಿತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಮಾಲಂಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕೆ.ಪಿ.ಸುರೇಶ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಪುಟ್ಟರಾಜು, ಶಿವಾನಂದ, ರಮೇಶ್, ಮಲ್ಲೇಶ್, ಶಿವಣ್ಣ, ಓಂಕಾರ್‌ಮೂರ್ತಿ, ಮಂಜುನಾಥ್, ಬಿ.ಸಿ.ಮಹದೇವಪ್ಪ, ಕಿರಣ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ವೀಣಾ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net