

ಸಿರಿಗೆರೆ: ಗ್ರಾಮೀಣ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಚಿಂತನೆ ಮೂಡಿಸುವ ಸಲುವಾಗಿ ವೇದಾಂತ ಲಿಮಿಟೆಡ್‌ನಿಂದ ಕ್ಯೂರಿಯಾಸಿಟಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಲಾಗುತ್ತಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವೇದಾಂತ ಲಿಮಿಟೆಡ್‌ನ ಮಹೇಶ್ ತಿಳಿಸಿದರು.
ಸಮೀಪದ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆಯಲ್ಲಿ ವೇದಾಂತ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ಕ್ಯೂರಿಯಾಸಿಟಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.
ವೇದಾಂತ ಲಿಮಿಟೆಡ್ ಮಕ್ಕಳ ಸರ್ವತೋಮುಖ ಪ್ರಗತಿಗಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿ ವೇತನ, ಶಾಲಾ ವಾಹನ ಉಚಿತ ನೋಟ್‌ಬುಕ್ ವಿತರಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿವರ್ಷವೂ ಹಮ್ಮಿಕೊಳ್ಳುತ್ತಾ ಬಂದಿದ್ದು, ಸದಾ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ರಾಜ್ಯ ವಿಜ್ಞಾನ ಪರಿಷತ್‌ನ ಎಚ್‌ಎಸ್‌ಟಿ ಸ್ವಾಮಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಕಡ್ಲೆಗುದ್ದು ಶಾಲೆ ಮಕ್ಕಳೇ ಪುಣ್ಯವಂತರು. ಪ್ರೌಢ ಹಂತದಲ್ಲಿ ವಿಜ್ಞಾನದ ಮಾದರಿ, ಪ್ರಯೋಗವನ್ನು ಪ್ರಯೋಗಾಲಯದಲ್ಲಿ ಕಲಿಯುತ್ತಿರುವ ಅವಕಾಶ ಕಲ್ಪಿಸಿದ ವೇದಾಂತ ಲಿಮಿಟೆಡ್‌ಗೆ ಧನ್ಯವಾದ ಎಂದರು
ಡಯಟ್ ಉಪನ್ಯಾಸಕರಾದ ಬಸವರಾಜ್, ಸಿದ್ದೇಶ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಡಾಕ್ಟರ್ ಮಹೇಶ್ ಮಾತನಾಡಿ, ವೇದಾಂತ ಲಿಮಿಟೆಡ್ ಮಕ್ಕಳಿಗಾಗಿ ನಿರ್ಮಿಸಿರುವ ವಿಜ್ಞಾನ ಪ್ರಯೋಗಾಲಯ ವೈಜ್ಞಾನಿಕ ಚಟುವಟಿಕೆಗಳಿಗೆ ಹೊಸ ನಾಂದಿ ಹಾಡಲಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ರಾಜಪ್ಪ, ನಿವೃತ್ತ ಭೂಗರ್ಭ ವಿಜ್ಞಾನಿಗಳಾದ ತಿಪ್ಪೇಸ್ವಾಮಿ, ವೇದಾಂತ ಲಿಮಿಟೆಡ್‌ನ ಭಾಗ್ಯಜ್ಯೋತಿ ಶುಭಂಗಿನಿ ಶಿಕ್ಷಕರಾದ ಮಂಜುನಾಥ, ನಟರಾಜ್, ನಾಗರಾಜ್, ಮಹಾಂತೇಶ್, ಹಾಗೂ ವೇದಾಂತ ಕಂಪನಿಯ ಸಿಬ್ಬಂದಿ ಇದ್ದರು.