

ಮೈಸೂರು: ಮಕ್ಕಳ ಪಠ್ಯವನ್ನು ರಂಗದ ಮೇಲೆ ತರುವ ಪ್ರಯತ್ನಗಳು ಹೆಚ್ಚಾಗಬೇಕು. ಅದರ ಮೌಲ್ಯಮಾಪನ ನಡೆಯಬೇಕು. ನಮ್ಮಲ್ಲಿ ಪ್ರದರ್ಶನ ಕೇಂದ್ರಿತ ರಂಗಭೂಮಿ ಚಟುವಟಿಕೆಗಳೇ ಹೆಚ್ಚಿದ್ದು, ಅದು ಬದಲಾಗಬೇಕು ಎಂದು ಬೆಂಗಳೂರಿನ ರಂಗಕಲಾವಿದೆ ಎಸ್.ವಿ. ಸುಷ್ಮಾ ಆಶಯ ವ್ಯಕ್ತಪಡಿಸಿದರು.
ನಟನ ರಂಗಮಂದಿರದಲ್ಲಿ ರಂಗಕರ್ಮಿ ಕೆ.ವಿ.ಸುಬ್ಬಣ್ಣ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ 2023-24ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ರಂಗ ಶಿಕ್ಷಣ; ವರ್ತಮಾನ ಮತ್ತು ಭವಿಷ್ಯದ ಅವಕಾಶಗಳು ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.
ರಂಗ ಶಿಕ್ಷಣ ಹಾಗೂ ಶಿಕ್ಷಣದಲ್ಲಿ ರಂಗಭೂಮಿ ಎರಡೂ ವಿಭಿನ್ನ ಕಲ್ಪನೆಗಳಾಗಿವೆ. ರಂಗ ಶಿಕ್ಷಣ ಎನ್ನುವುದು ಒಂದು ನಾಟಕಕ್ಕೆ ಬೇಕಾದ ಎಲ್ಲ ಬಗೆಯ ತರಬೇತಿಯನ್ನು ಒಳಗೊಂಡ ಕಲೆ. ರಂಗಭೂಮಿಗೆ ಬಂದವರೆಲ್ಲ ಸಿನಿಮಾ ನಟ ಆಗಲು ಸಾಧ್ಯವಿಲ್ಲ. ರಂಗಭೂಮಿಯಲ್ಲಿನ ಬೇರೆ ಕ್ಷೇತ್ರಗಳಿದ್ದು, ಬೆಳಕು, ಸಂಗೀತ, ರಂಗವಿನ್ಯಾಸ, ಮೇಕಪ್‌ನಂತಹ ಚಟುವಟಿಕೆಗಳ ಕಡೆಗೂ ಗಮನ ನೀಡಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ನಟ ಮಂಡ್ಯ ರಮೇಶ್ ಮಾತನಾಡಿ, ರಾಜ್ಯದ ರಂಗ ತಂಡಗಳಲ್ಲಿ ಉತ್ತಮ ನಟ-ನಟಿಯರು, ಬೆಳಕು- ಪ್ರಸಾದನ ಕಲಾವಿದರು ಹೊಸತಾಗಿ ಬೆಳಕಿಗೆ ಬರುತ್ತಿದ್ದಾರೆ. ಆದರೆ ಇವರೆಲ್ಲರನ್ನೂ ಒಳಗೊಂಡು ಇಡೀ ತಂಡವನ್ನು ನಿರ್ವಹಿಸಬಲ್ಲ ಸಂಘಟಕರ ಕೊರತೆ ರಾಜ್ಯದಲ್ಲಿ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಂಗ ಶಿಕ್ಷಣ, ತರಬೇತಿಗೆ ಹೆಚ್ಚಿನ ಬೇಡಿಕೆ ಇದ್ದು, ಖಾಸಗಿ ಶಾಲೆಗಳಲ್ಲಿ ರಂಗಭೂಮಿ ತರಬೇತುಗಾರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇಂತಹ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಯ ರಂಗಶಿಕ್ಷಕ ಸಂತೋಷ್ ಗುಡ್ಡಿಯಂಗಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿಯೂ 2008ರಿಂದ ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಮಕ್ಕಳ ರಂಗಶಿಕ್ಷಣಕ್ಕೆ ರಂಗಭೂಮಿ ಅತ್ಯಂತ ಉತ್ತಮ ಮಾಧ್ಯಮವಾಗಿದ್ದು, ಮಕ್ಕಳಿಗೆ ಕಲಿಸಲು ಪ್ರೌಢಶಾಲೆಗಳಲ್ಲಿ ರಂಗಶಿಕ್ಷಕರ ನೇಮಕ ಆಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.
ರಂಗಕಲಾವಿದರಾದ ರಾಜಪ್ಪ ದಳವಾಯಿ, ಬಿ.ಆರ್.ವೆಂಕಟರಮಣ ಐತಾಳ, ಮೇಘ ಸಮೀರ, ಎನ್.ಧನಂಜಯ ಇತರರು ಇದ್ದರು. ಇದೇ ಸಂದರ್ಭ ರಂಗಾಸಕ್ತರು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.