ಮಕ್ಕಳ ನಿರಂತರ ಹಾಜರಾತಿಯಿಂದ ಶೈಕ್ಷಣಿಕ ಪ್ರಗತಿ

17 HANUR 1
Published on

ಹನೂರು: ಮಕ್ಕಳ ಹಾಜರಾತಿ ನಿರಂತರವಾಗಿದ್ದರೆ ಕಲಿಕೆ ಉತ್ತಮಗೊಳ್ಳುತ್ತದೆ. ಇದರಿಂದ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಶಿಕ್ಷಕ ಶಾಂತರಾಜು ತಿಳಿಸಿದರು.

ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸುವ ಸಲುವಾಗಿ ಶನಿವಾರ ಆಯೋಜಿಸಿದ್ದ ನನ್ನ ಶಾಲೆ, ನನ್ನ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ದೇಶದ ಭವಿಷ್ಯದ ಅಡಿಗಲ್ಲು. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕೋಟ್ಯಂತರ ರೂ. ವ್ಯಯಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಶೂ, ಬಿಸಿಯೂಟ, ಹಾಲು ವಿತರಣೆ ಸೇರಿದಂತೆ ಇನ್ನೂ ಹಲವು ಸವಲತ್ತುಗಳನ್ನು ನೀಡುತ್ತಿದೆ. ಜತೆಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುತ್ತಿದೆ. ಆದರೆ ಅನಕ್ಷರಸ್ಥರು ಹಾಗೂ ಬಡತನ ವರ್ಗಕ್ಕೆ ಸೇರಿದ ಕೆಲ ಕುಟುಂಬಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದರಿಂದ ಮಕ್ಕಳು ಆಗಾಗ್ಗೆ ಶಾಲೆಗೆ ಗೈರಾಗುತ್ತಿರುತ್ತಾರೆ. ಪಾಠ, ಪ್ರವಚನದ ಮೇಲೆ ಆಸಕ್ತಿ ಹೊಂದುವುದಿಲ್ಲ. ಪರಿಣಾಮ ಕಲಿಕೆ ಕುಂಠಿತಗೊಳ್ಳುತ್ತದೆ. ಇದರಿಂದ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ತೊಡಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳು ನಿತ್ಯ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಹಾದೇವ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ವೆಂಕಟೇಶ್, ಶಿಕ್ಷಣ ಸಂಯೋಜಕ ಚಿನ್ನಪ್ಪಯ್ಯ, ಬಿಸಿಯೂಟ ನೋಡಲ್ ಅಧಿಕಾರಿ ದೇವರಾಜು, ಮುಖ್ಯ ಶಿಕ್ಷಕ ಮಹಾದೇವ, ಶಿಕ್ಷಕರಾದ ಜಿ.ಲೋಕೇಶ್, ಪ್ರದೀಪ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net