ಮಕ್ಕಳ ಜತೆ ತೆರಳಿದ ನೀಲವ್ವ

17SIRSI4
Published on

ಶಿರಸಿ: ದಿಕ್ಕು ದೆಸೆಯಿಲ್ಲದೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಹಾವೇರಿಯ ಬಸವನಾಳದ ನೀಲವ್ವ (76) ಎಂಬಾಕೆಯನ್ನು ಇಲ್ಲಿನ ಸಹಾಯ ಟ್ರಸ್ಟ್ ಮುಖ್ಯಸ್ಥ ಸತೀಶ ಶೆಟ್ಟಿ ಅವರು ಆಕೆಯ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಜತೆಯಲ್ಲಿ ಯಾರೊಬ್ಬರೂ ಇಲ್ಲದೆ ಇತ್ತೀಚೆಗೆ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ನೀಲವ್ವ ದಾಖಲಾಗಿರುವುದನ್ನು ಗಮನಿಸಿದ ವೈದ್ಯ ವಿನಾಯಕ ಭಟ್ಟ ಅವರು ಸಹಾಯ ಟ್ರಸ್ಟ್ ಮುಖ್ಯಸ್ಥ ಸತೀಶ ಶೆಟ್ಟಿ ಅವರೊಂದಿಗೆ ಸೋಮವಾರ ವೃದ್ಧೆಯ ಕುರಿತು ಮಾತನಾಡಿದ್ದರು. ಸಾಯಂಕಾಲ ವೃದ್ಧೆಯನ್ನು ಮಾತನಾಡಿಸಿದಾಗ ತಾನು ಹುಬ್ಬಳ್ಳಿಯಲ್ಲಿ ಟ್ರೆಕಿಯೊಸ್ಟೊಮಿ ಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ, ಜತೆ ಯಾರೂ ಇಲ್ಲದ್ದಾಗಿ ಹೇಳಿಕೊಂಡಿದ್ದಳು. ಈ ಕುರಿತು ಕಾರ್ಯತತ್ಪರರಾದ ಸತೀಶ ಶೆಟ್ಟಿ ಅವರು ಹಾವೇರಿಯ ಸ್ಪಂದನಾ ದತ್ತು ಕೇಂದ್ರದ ಎಂ.ಎನ್ ಹೊನ್ನಕೇರಿ, ಶಿಗ್ಗಾಂವಿ ಪೊಲೀಸ್ ಠಾಣೆ, ಹಾವೇರಿ ಜಿಲ್ಲೆಯ ಪಿಎಸ್​ಐ ಎಂ.ಜಿ. ತಗಡಿನಮನೆ ಸಹಕಾರದಿಂದ ಆಕೆಯ ಮಕ್ಕಳಾದ ಪುಟ್ಟಪ್ಪ ಭೀಮಪ್ಪ ಮಾದರ ಮತ್ತು ಬಸಪ್ಪ ಭೀಮಪ್ಪ ಮಾದರಗೆ ಮಾಹಿತಿ ಮುಟ್ಟಿಸಿದರು. ಅಲ್ಲದೆ, ಶಿರಸಿಗೆ ಬಂದು ನೀಲವ್ವನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಸೋಮವಾರ ಸಂಜೆ ಮಕ್ಕಳು ಆಗಮಿಸಿ ತಾಯಿಯನ್ನು ಕರೆದುಕೊಂಡು ಹೋಗಿದ್ದು, ಸತೀಶ ಶೆಟ್ಟಿ ಅವರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net