ಮಕ್ಕಳ ಗ್ರಾಮಸಭೆಗೆ ಕಾಯಕಲ್ಪ; ಮಕ್ಕಳಸ್ನೇಹಿ ಗ್ರಾಪಂ ಅಭಿಯಾನ ಜಾರಿ

27cbp1b
Published on

ಚಿಕ್ಕಬಳ್ಳಾಪುರ : ಭಾವಿ ಪ್ರಜೆಗಳಲ್ಲಿ ಪೌರಪ್ರಜ್ಞೆ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್‌ನಲ್ಲಿ ಆಯೋಜಿಸುತ್ತಿದ್ದ ಮಕ್ಕಳ ವಿಶೇಷ ಗ್ರಾಮಸಭೆಗೆ ಈ ವರ್ಷ ಕಾಯಕಲ್ಪ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಕ್ಕಳಸ್ನೇಹಿ ಗ್ರಾಪಂ ಅಭಿಯಾನ ಜಾರಿ ಮೂಲಕ ಗ್ರಾಪಂಗಳನ್ನು ಮಕ್ಕಳಸ್ನೇಹಿಯಾಗಿಸಿದೆ.

ನ.14ರಿಂದ 2021ರ ಜ.24ರವರೆಗೆ 10 ವಾರ ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದಲ್ಲಿ ಬಾಲಮಿತ್ರ ನೇಮಕ, ಓದುವ ಬೆಳಕು, ಮಕ್ಕಳ ಕೋರಿಕೆ ಪತ್ರ, ಮಕ್ಕಳ ದನಿ ಬಾಕ್ಸ್, ಎರಡು ವರ್ಷದ ನಡಾವಳಿ ವರದಿ ಹಾಗೂ ಅನುಪಾಲನಾ ವರದಿ ಸಲ್ಲಿಕೆ ಸೇರಿ 6 ಚಟುವಟಿಕೆಗಳನ್ನು ರೂಪಿಸಿದೆ.

‘ಓದುವ ಬೆಳಕು’ ಕಾರ್ಯಕ್ರಮದಲ್ಲಿ ಆಯಾ ಪಂಚಾಯಿತಿಯ ಮಕ್ಕಳ ಹೆಸರನ್ನು ಗ್ರಂಥಾಲಯಗಳ ಮೂಲಕ ನೋಂದಾಯಿಸಿಕೊಳ್ಳಲಾಗುತ್ತದೆ, ಇದರ ಸದಸ್ಯತ್ವ ಶುಲ್ಕವನ್ನು ಗ್ರಾಪಂಗಳೇ ಭರಿಸುವುದರ ಜತೆಗೆ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಿದ್ದು, ಈಗಾಗಲೇ ಎಲ್ಲ ಗ್ರಾಪಂಗಳಲ್ಲಿ ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ.

ಗ್ರಾಮಗಳ ಅಭಿವೃದ್ಧಿ, ವಿವಿಧ ಯೋಜನೆಗಳ ಅನುಷ್ಠಾನದಲ್ಲೇ ನಿರತರಾಗಿ ಮಕ್ಕಳು, ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಉಳಿದಿದ್ದ ಗ್ರಾಪಂಗಳಿಗೆ ನಿರಂತರ ಚಟುವಟಿಕೆ ನೀಡಲಾಗಿದೆ. ಮಕ್ಕಳು ಹಾಗೂ ಗ್ರಾಪಂಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ವೇದಿಕೆ ಸೃಷ್ಟಿಸಿದೆ.

ಏನೇನು ನಡೆಯುತ್ತೆ? : ಮಕ್ಕಳ ವಿಶೇಷ ಗ್ರಾಮಸಭೆಗಳು, ಮಕ್ಕಳಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ, ಕಥೆ ಹೇಳುವುದು, ಚಿತ್ರಕಲೆ ಜನಪದ ಗೀತೆ, ರಂಗಭೂಮಿ ಚಟುವಟಿಕೆ, ಮಾನಸಿಕ ಆರೋಗ್ಯ ರಕ್ಷಣೆ, ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮ ಸೇರಿ ಹಲವು ಚಟುವಟಿಕೆ ಅಭಿಯಾನದಲ್ಲಿ ನಡೆಯಲಿದ್ದು ಮಕ್ಕಳ ಚುಚ್ಚುಮದ್ದು, ಲಸಿಕೆ ನೀಡುವ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿ ಸಹ ಕಲೆ ಹಾಕಲಿದೆ.

ಗ್ರಾಪಂ ಕಾರ್ಯಪಡೆ : ಅಭಿಯಾನದ ಸಮರ್ಪಕ ಅನುಷ್ಠಾನಕ್ಕೆ ಪಂಚಾಯಿತಿ ಶಿಕ್ಷಣ ಕಾರ್ಯಪಡೆ ಸದಸ್ಯರಲ್ಲಿ ಒಬ್ಬರನ್ನು ಬಾಲಮಿತ್ರರನ್ನಾಗಿ ನೇಮಿಸಿದ್ದು, ಇವರು ಮಕ್ಕಳೊಡನೆ ಸಂರ್ಪಕದಲ್ಲಿರುತ್ತಾರೆ. ವಿವಿಧ ಇಲಾಖೆಗಳ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುವುದು ಸೇರಿ 10 ವಾರಗಳ ಅಭಿಯಾನದಲ್ಲಿ ಕೇಳಿಬಂದ ಅಭಿಪ್ರಾಯಗಳನ್ನು ಆಧರಿಸಿ ಕ್ರಿಯಾಯೋಜನೆ ತಯಾರಿಸುವಲ್ಲಿ ಪಂಚಾಯಿತಿಗೆ ನೆರವಾಗುತ್ತಾರೆ. ಈಗಾಗಲೇ ಮಕ್ಕಳ ಗ್ರಾಮಸಭೆ ನಡೆಯುವುದಕ್ಕೂ ಮೊದಲು ಪಂಚಾಯಿತಿ ವ್ಯಾಪ್ತಿಯ ಶಾಲೆಯ ಶಿಕ್ಷಕರೊಬ್ಬರಿಂದ ಕರೊನಾ ನಿಯಂತ್ರಣ ಸಂಬಂಧ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ಮಕ್ಕಳ ದನಿ ಪೆಟ್ಟಿಗೆ : ಮಕ್ಕಳ ಸಮಸ್ಯೆಗಳ ಕುರಿತು ಮಕ್ಕಳು ಮತ್ತು ಪಾಲಕರು ಪತ್ರ ಬರೆದು ಹಾಕಲು ಪಂಚಾಯಿತಿಗಳ ಪ್ರತಿ ಗ್ರಾಮಗಳಲ್ಲಿ ಶಾಲೆ, ವಸತಿನಿಲಯ, ಅಂಗನವಾಡಿ, ನ್ಯಾಯಬೆಲೆ ಅಂಗಡಿ, ಹಾಲು ಉತ್ಪಾದಕರ ಸಹಾಯಕರ ಸಂಘ ಸೇರಿ ವಿವಿಧೆಡೆ ’ಮಕ್ಕಳ ದನಿ ಪೆಟ್ಟಿಗೆ’ಅಳವಡಿಸಲಾಗುತ್ತಿದ್ದು ಮಕ್ಕಳ ಸಹಾಯವಾಣಿ 1098 ಸಂಖ್ಯೆ ಸೇವೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕೊನೆಗೆ ಪಿಡಿಒಗಳು ಅಭಿಪ್ರಾಯ ಕ್ರೋಡೀಕರಿಸಿ ಯೋಜನೆ ರೂಪಿಸುತ್ತಾರೆ.

ಏನಿದು ಮಕ್ಕಳ ವಿಶೇಷ ಗ್ರಾಮಸಭೆ?: ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು, ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿ, ಶಾಲೆ, ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು ಹಾಗೂ ಗ್ರಾಪಂ ಅಧ್ಯಕ್ಷರ ಜತೆಗೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆಯಲ್ಲವೆ ಎಂದು ನಿರ್ಲಕ್ಷೃ ತೋರುವುದಾಗಲಿ, ಉಡಾಫೆ ಮಾಡುವಂತಿಲ್ಲ. ಸಾಮಾನ್ಯ ಗ್ರಾಮಸಭೆಗಿರುವಷ್ಟು ಕಿಮ್ಮತ್ತು, ವಿಶೇಷ ಮಾನ್ಯತೆ ಈ ಮಕ್ಕಳ ಗ್ರಾಮಸಭೆಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net