

ಚಿಕ್ಕಮಗಳೂರು: ವಿದ್ಯಾರ್ಥಿಗಳು ನಿತ್ಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರಬಹುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನೇತಾಜಿ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶ್ರೀ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜು, ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಶನಿವಾರ ಪಿಯು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಪಾಲಕರು, ಶಿಕ್ಷಕರು ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಕೀರ್ತಿ ಹೆಚ್ಚಿಸಬೇಕು ಎಂದರು.
ಎಂಎಲ್ಸಿ ಎಸ್.ಎಲ್.ಬೋಜೇಗೌಡ ಮಾತನಾಡಿ, ಕಲಿಕೆಗೆ ನೀಡುವ ಆದ್ಯತೆ ಕ್ರೀಡೆಗೂ ನೀಡಬೇಕು. ದೇಹ, ಮನಸ್ಸಿನ ಆರೋಗ್ಯ ಸರಿಯಿದ್ದಾಗ ಮಾತ್ರ ಗುಣಮಟ್ಟದ ಪ್ರದರ್ಶನ ನೀಡಲು ಸಾಧ್ಯ ಎಂದು ಹೇಳಿದರು.
1,500ಕ್ಕೂ ಹೆಚ್ಚು ಜೂನಿಯರ್ ಕಾಲೇಜುಗಳು ಇದ್ದು, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ. ಇದರಿಂದಾಗಿ ಮಕ್ಕಳ ಕ್ರೀಡಾ ಸಾಧನೆಗೆ ಹಿನ್ನಡೆಯಾಗುತ್ತಿದೆ. ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪಿಯು ಉಪ ನಿರ್ದೇಶಕ ದೇವೇಂದ್ರಪ್ಪ, ಶ್ರೀ ಸಾಯಿ ಏಂಜಲ್ಸ್ ವಿದ್ಯಾ ಸಂಸ್ಥೆ ಜಂಟಿ ಕಾರ್ಯದರ್ಶಿ ಕಾರ್ತಿಕ್ ಇತರರಿದ್ದರು.