ಮಕ್ಕಳ ಕಳ್ಳರು ಕೇವಲ ವದಂತಿ: ಎಸ್ ಪಿ ಚೇತನ್ ಸ್ಪಷ್ಟನೆ

Published on

ಮೈಸೂರು: ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ದು, ಅದು ಕೇವಲ ವದಂತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸ್ಪಷ್ಟ ಪಡಿಸಿದರು.
ನಂಜನಗೂಡು ತಾಲೂಕು ಹುಲ್ಲಹಳ್ಳಿಯ ಕುರಿಹುಂಡಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಇಬ್ಬರನ್ನು ಸಾರ್ವಜನಿಕರು ಮಕ್ಕಳ ಕಳ್ಳರು ಎಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಅವರು ಚಿಂದಿ ಸಂಗ್ರಹಿಸುವವರು ಎನ್ನುವುದು ತಿಳಿದು ಬಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಲತಃ ಮಂಡ್ಯ, ಕೋಲಾರದವರಾದ ಇಬ್ಬರು ಆರೋಪಿಗಳು ಹಳ್ಳಿಗಳಲ್ಲಿ ಚಿಂದಿ, ಪೇಪರ್ ಹಾಯುವ ಅಲೆಮಾರಿಗಳಾಗಿದ್ದು, ಪಟ್ಟಣ, ನಗರ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆಯ್ದರಿಂದ ಜನರು ಏಕಾಏಕಿ ಯಾವುದೇ ನಿರ್ಧಾರಕ್ಕೆ ಬಾರದೆ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಯಾವುದೇ ಹಲ್ಲೆ ನಡೆಸದ ದೂರವಾಣಿ ಸಂಖ್ಯೆ 112 ಅಥವಾ ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.
ಸಂಶಯಿಸಿ ಅಮಾಯಕರನ್ನು ಮಕ್ಕಳ ಕಳ್ಳರು ಎಂದು ಹಲ್ಲೆ ಮಾಡಿ ಕಾನೂನು ಮೀರಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಅಲ್ಲದೇ ಮಕ್ಕಳು ಕಳ್ಳರು ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ಧಿ ಹರಡುವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
18 ವರ್ಷದೊಳಗಿನವರು ಕಾಣೆಯಾದರೆ ಅಪಹರಣ ಎಂದು ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಮಕ್ಕಳ ಕಳ್ಳತನದ ವರದಿಯಾಗಿಲ್ಲ. ಬಹಿಷ್ಕಾರ ಆಗುವುದು ಕಾನೂನು ವಿರುದ್ಧವಾದದ್ದು. ಬಹಿಷ್ಕಾರದಂತಹ ಪ್ರಕರಣಗಳಲ್ಲಿ ತಹಸಿಲ್ದಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೋಗಿ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವರು ಎಂದು ಪ್ರಶ್ನೆಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net