

ಚನ್ನರಾಯಪಟ್ಟಣ: ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಪರಿಕಲ್ಪನೆ ಮೂಡಿಸಲು ವಿಜ್ಞಾನ ವಸ್ತುಪ್ರದರ್ಶನ ಬಹಳಷ್ಟು ಸಹಕಾರಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಕಾರ್ಯಕ್ರಮದಡಿ ಆಯೋಜಿಸಿದ್ದ ವಿಜ್ಞಾನ, ಗಣಿತ ಮತ್ತು ಕಲಾ ವಸ್ತುಪ್ರದರ್ಶನ 2025-26ನೇ ಸಾಲಿನ ಕೋರ್ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಲು ಪ್ರೇರೆಪಿಸುವ ಮೂಲಕ ಮಕ್ಕಳಿಗೆ ವೈಜ್ಞಾನಿಕ ವಿಚಾರಧಾರೆ ಬೆಳೆಸುವುದು, ಹೊಸ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಆಸಕ್ತಿ ಮೂಡಿಸಲಾಗುವುದು. ಈ ವೇದಿಕೆಯಲ್ಲಿ ಮಕ್ಕಳಿಗೆ ಆಟಿಕೆ ಮತ್ತು ಪ್ರಾಯೋಗಿಕ ಮಾದರಿ ರೂಪಿಸುವ ಅವಕಾಶ ಒದಗಲಿದ್ದು, ವೈಜ್ಞಾನಿಕ ಮತ್ತು ತಂತ್ರಜ್ಞಾನದ ಅಂಶಗಳನ್ನು ಪ್ರಾಯೋಗಿಕವಾಗಿ ಅರಿಯಲು ಸಹಾಯವಾಗುತ್ತದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿದೇಶಗಳೊಂದಿಗೆ ಸ್ಪರ್ಧಿಸಲು ಹಾಗೂ ಹೊಸ ಸಂಶೋಧನೆಗಳನ್ನು ನಡೆಸಲು ಮುಂದಾಗುತ್ತಿದೆ. ಪ್ರಪಂಚದ ಜನಸಂಖ್ಯೆ 850 ಕೋಟಿ ಮೀರಿದ್ದು, ಆಹಾರದ ಉತ್ಪಾದನೆಯಲ್ಲಿ ಕೊರತೆ ನೀಗಿಸಲು ಕೃಷಿಯಲ್ಲಿ ಹೊಸ ತಳಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ವಿಜ್ಞಾನ-ತಂತ್ರಜ್ಞಾನ ಅವಶ್ಯ. ಸೌರಶಕ್ತಿಯಂತಹ ಹಸಿರು ಶಕ್ತಿ ಉಪಯೋಗ ಮತ್ತು ಶುದ್ಧ ಶಕ್ತಿ ಮೂಲಗಳ ಬಳಕೆ ಹೆಚ್ಚಿಸಿ, ಪರಿಸರದ ಮೇಲೆ ಮಾಲಿನ್ಯ ಕಡಿಮೆ ಮಾಡಬಹುದು. ರಾಸಾಯನಿಕಮುಕ್ತ ಆಹಾರ ಮತ್ತು ಬೇರೆ ಬೇರೆ ಬಗೆಯ ಸಾವಯವ ತಂತ್ರಜ್ಞಾನದ ಮೂಲಕ ಕೃಷಿ ಪ್ರೋತ್ಸಾಹಿಸಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಮಾದರಿ, ನವೀಕರಿಸಬಹುದಾದ ಇಂಧನ, ಆರೋಗ್ಯ ಮತ್ತು ಸ್ವಚ್ಛತೆ, ಬಾಹ್ಯಾಕಾಶ ಸಾಧನೆ ಮುಂಚೂಣಿಯ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ಶಾಲೆಯ 100 ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಮಾದರಿ, ಯೋಜನೆಗಳನ್ನು ಪ್ರದರ್ಶಿಸಿ, ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಶಂಕರ್, ಮುಖ್ಯಶಿಕ್ಷಕಿ ನೇತ್ರಾವತಿ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜೇಗೌಡ, ನೌಕರರ ಸಂಘದ ನಿರ್ದೇಶಕ ರಂಗಸ್ವಾಮಿ ಮುಖಂಡರಾದ ಯೋಗೀಶ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.