

ಸಿಂದಗಿ:ಪಾಲಕರು ಬೇಸಿಗೆ ಶಿಬಿರಗಳಿಗೆ ಸೇರಿಸುವ ಮೂಲಕ ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರೋತ್ಸಾಹಿಸಬೇಕೆಂದು ಭೀಮಾ ಸಂಸ್ಥೆಯ ನಿದೇರ್ಶಕ ಪ್ರಶಾಂತ ಕಮತಗಿ ಹೇಳಿದರು.
ನಗರದ ಹೊರವಲಯದಲ್ಲಿನ ಭೀಮಾ ಯೂನಿವರ್ಸಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳು ದೈಹಿಕ, ಮಾನಸಿಕ ಮತ್ತು ಬುದ್ಧಮತ್ತೆಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ಇಂತಹ ಶಿಬಿರಗಳು ಮಕ್ಕಳ ವಯೋಮಾನಕ್ಕೆ ಸಹಜವಾದ ಕಲಿಕೆ ಮತ್ತು ಪಠ್ಯೇತರವಾಗಿ ಸಂಗೀತ, ಕರಾಟೆ, ಯೋಗ, ನೃತ್ಯಗಳ ಅಭಿರುಚಿಯನ್ನು ಅನುಭವಿಸುವಂತೆ ಮಾಡುತ್ತವೆ. ಪಾಲಕರು ಈ ಶಿಬಿರಗಳನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲೆ ಶಾಹೀನ್ ಶೇಖ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಗುವಿನ ಆಸಕ್ತಿದಾಯಕ ಕಲಿಕೆ ಭವಿಷ್ಯದ ಬುನಾದಿಯಾಗುತ್ತದೆ. ಶಿಬಿರದಲ್ಲಿ ಮಕ್ಕಳು ಕಲಿಕೆಯೊಂದಿಗೆ ಆಟೋಟಕ್ಕೂ ಎದರುಗೊಳ್ಳುವ ಮೂಲಕ ಸಂಭ್ರಮಿಸಿದರು ಎಂದರು.
ವಿದ್ಯಾರ್ಥಿ ಪಾಲಕ ಜಿ.ಎಸ್. ಪಾಟೀಲ ಮಾತನಾಡಿ, ಶಾಲೆಯ ವಾತಾವರಣದಲ್ಲಿ ಮಕ್ಕಳ ಕಲಿಕಾ ಗುಣಮಟ್ಟವೂ ಉತ್ತಮವಾಗಿದೆ. ಇಲ್ಲಿನ ಬೋಧಕ ವೃಂದದವರ ವಿದ್ಯಾರ್ಥಿ ಕಾಳಜಿಯ ಜತೆಗೆ ಪಠ್ಯದ ಸುಲಲಿತ ಬೋಧನೆಯೂ ಚೆನ್ನಾಗಿದೆ ಎಂದು ಶ್ಲಾಸಿದರು.
ನಂತರ ಶಿಬಿರದ ಮಕ್ಕಳು ಶಾಲೆ, ಪಾಠ, ಪಠ್ಯೇತರ, ಮನರಂಜನೆ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಕರಾಟೆ, ಯೋಗದ ಮಜಲುಗಳನ್ನು ಪ್ರದರ್ಶಿಸಿದರು. ಗಾಯನ, ಸಮೂಹ ನೃತ್ಯಗಳ ಮೂಲಕ ಶಿಬಿರವನ್ನು ಸಂಭ್ರಮಿಸಿದರು.
ಸಂಸ್ಥೆ ನಿರ್ದೇಶಕ ದತ್ತು ಮಾವೂರ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿದ್ದರು.