

ಬಾಳೆಹೊನ್ನೂರು: ತರಕಾರಿ ಮಕ್ಕಳ ಆರೋಗ್ಯಕ್ಕೆ ಪೂರಕವಾಗಿದ್ದು, ಮಕ್ಕಳಿಗೆ ಉತ್ತಮ ಆರೋಗ್ಯ ನೀಡಲಿದೆ ಎಂದು ಮುಖ್ಯಶಿಕ್ಷಕಿ ರಜನಿ ದೇವಯ್ಯ ಹೇಳಿದರು.
ರೇಣುಕನಗರದ ಸಂಸ್ಕೃತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ತರಕಾರಿ ದಿನಾಚರಣೆಯಲ್ಲಿ ಮಾತನಾಡಿ, ತರಕಾರಿ ದೇಹಕ್ಕೆ ಸರಿಯಾದ ಪೋಷಣೆ ಒದಗಿಸಲಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುವುದು, ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.
ಆರೋಗ್ಯಕರ ಆಹಾರ ಪದ್ಧತಿ ಭಾಗವಾಗಿ ತರಕಾರಿ ಸೇವಿಸುವುದರಿಂದ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು. ಪ್ರಮುಖವಾಗಿ ಹೃದಯ ರೋಗ, ಮಧುಮೇಹ, ಕ್ಯಾನ್ಸರ್ ಮುಂತಾದವನ್ನು ತಡೆಗಟ್ಟಲು ಸಹಕಾರಿಯಾಗಲಿದೆ.
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಇದರ ಮಹತ್ವ ತಿಳಿಸಿ ನಿತ್ಯ ಬಳಸಲು ಮಾರ್ಗದರ್ಶನ ಮಾಡಿದರೆ ಉತ್ತಮ ಆರೋಗ್ಯದೊಂದಿಗೆ ಜ್ಞಾನವೂ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ತರಕಾರಿ ದಿನ ಆಚರಿಸಲಾಗಿದೆ ಎಂದರು.
ಪುಟಾಣಿಗಳು ವಿವಿಧ ತರಕಾರಿಗಳ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದಿದ್ದು, ಎಲ್ಲ ತರಕಾರಿಗಳನ್ನು ವೀಕ್ಷಿಸಿ ಅದರ ಮಹತ್ವ ತಿಳಿದುಕೊಂಡರು. ಶಿಕ್ಷಕರಾದ ದೀಪಿಕಾ, ಅಶ್ವಿನಿ, ರೇಷ್ಮಾ, ಜಾಫ್ರಿನ್ ಮತ್ತಿತರರಿದ್ದರು.