

ಕಡೂರು: ಅಪೌಷ್ಟಿಕತೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ರಾಷ್ಟ್ರೀಯ ಪೋಷಣ್ ಅಭಿಯಾನ ಮಹತ್ತರ ಕಾರ್ಯಕ್ರಮವಾಗಿದೆ ಎಂದು ಜಿಗಣೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.
ಯರೇಹಳ್ಳಿಯಲ್ಲಿ ಸೋಮವಾರ ಜಿಗಣೇಹಳ್ಳಿ ಮತ್ತು ದೊಡ್ಡಪಟ್ಟಣಗೆರೆ ಗ್ರಾಪಂ ವ್ಯಾಪ್ತಿಯಡಿ ಸಿಡಿಪಿಒ ಇಲಾಖೆಯಿಂದ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನದಲ್ಲಿ ಮಾತನಾಡಿ, ಮಹಿಳೆಯರು ಮಕ್ಕಳ ಆರೋಗ್ಯದ ಕಾಳಜಿ ವಹಿಸಲು ಪೋಷಣ್ ಅಭಿಯಾನ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಮಕ್ಕಳು, ಮಹಿಳೆಯರನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯಕ್ರಮವಾಗಿದೆ. ಇಲಾಖೆಯ ಸವಲತ್ತುಗಳನ್ನು ಮಹಿಳೆಯರು ಪಡೆದುಕೊಳ್ಳಬೇಕಿದೆ. ಗ್ರಾಮದಲ್ಲಿ ಆರೋಗ್ಯಯುತ ಸಮಾಜ ನಿರ್ಮಿಸಲು ಅಂಗನವಾಡಿ ಸಹಾಯಕಿಯರ ಪಾತ್ರ ಪ್ರಮುಖ ಎಂದರು.
ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಕೆ.ಮುಬಿನಾ, ಗ್ರಾಪಂ ಮಾಜಿ ಅಧ್ಯಕ್ಷೆ ಸುನಾಂದ ನೀಲಕಂಠಪ್ಪ, ಭಾರತಿ, ಅಂಗನವಾಡಿ ಕೇಂದ್ರದ ಸಹಾಯಕಿಯರಾದ ಮಂಜುಳಾ, ಸುಮಾ, ಶಾರದಮ್ಮ, ಗೌರಮ್ಮ, ಸುಶೀಲಮ್ಮ, ಶಾಂತಮ್ಮ ಹಾಗೂ ಗ್ರಾಮಸ್ಥರು ಇದ್ದರು.