

ಬೆಟ್ಟದಪುರ: ಮಳೆಗಾಲದ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಹಾರನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಕೆ.ಸಿ.ಸತೀಶ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಸಭೆ ಹಾಗೂ ಡೆಂಘೆ ವಿರೋಧಿ ಮಾಸಚಾರಣೆ ಸಭೆಯಲ್ಲಿ ಮಾತನಾಡಿದ ಅವರು, ಮನೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟು ಪರಿಸರ ಕಾಪಾಡಿಕೊಂಡು ಡೆಂಘೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚು ಗಮನಹರಿಸಬೇಕು. ಮನೆ ಸುತ್ತಲಿನ ಪ್ರದೇಶದಲ್ಲಿ ನೀರು ನಿಂತು ಗಲೀಜು ಉಂಟಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವುದಕ್ಕೆ ಕಾರಣವಾಗುತ್ತಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಡೆಂಘೆ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಮುಖಂಡರಾದ ಎಚ್.ಟಿ.ಗೋವಿಂದೇಗೌಡ, ನಾರಾಯಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಾವ್ಯಾ ಜನಾರ್ಧನ್, ಉಪಾಧ್ಯಕ್ಷ ಮಹೇಶ್, ಅಂಬಲಾರೆ ಡೇರಿ ಕಾರ್ಯದರ್ಶಿ ವೆಂಕಟೇಶ್, ಶಿಕ್ಷಕರಾದ ಚಂದ್ರಶೇಖರ್, ವಿದ್ಯಾಶ್ರೀ, ತಜೀಯ್ ಫರ್ವಿನ್, ಸ್ವಾತಿ, ಜಬೀನ ಬೀಬಿ, ಚಂದನಾ, ರುಕ್ಮಿಣಿ, ನಾಗರತ್ನಾ, ಯಶೋದಮ್ಮ ಇದ್ದರು.