

ಭಾಲ್ಕಿ: ಪಾಲಕರು, ಶಿಕ್ಷಕರು ಮಕ್ಕಳ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಮಾಜಿ ಸಂಸದ ಹಾಗೂ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಪಟ್ಟಣದ ಭಾತಂಬ್ರಾ ರಸ್ತೆಯ ಭಾಲ್ಕೇಶ್ವರ ಶಿಶು ವಿಹಾರ, ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಪಂಜರದ ಗಿಣಿಯನ್ನಾಗಿಸದೆ ಹಾರುವ ಹಕ್ಕಿಗಳನ್ನಾಗಿಸಿ ಬೆಳೆಸಬೇಕು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನೇದಿನೇ ಬೆಳೆಯುತ್ತಲೇ ಇದೆ. ಎಂಜನಿಯರಿಂಗ್ ಪದವಿ ಪೂರ್ಣಗೊಳಿಸಿದ ಸುಮಾರು ಒಂದು ಕೋಟಿ ವಿದ್ಯಾರ್ಥಿಗಳು ಉದ್ಯೋಗ ಇಲ್ಲದೆ ಅಲೆದಾಡುತ್ತಿದ್ದಾರೆ. ೧೦ ಲಕ್ಷ ಬಿ.ಇಡಿ ಪದವೀಧರರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಪಾಲಕರು ಒತ್ತಡ ಹೇರದೇ ಮಕ್ಕಳ ಅಭಿರುಚಿಯನ್ನು ಪ್ರೋತ್ಸಾಹಿಸಿ ಉದ್ಯೋಗ ಸೃಷ್ಟಿಸುವ ಸಾಮಾರ್ಥ್ಯ ಬೆಳೆಸಬೇಕು ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಸಮಾಜದ ಸರ್ವತೋಮುಖ ಪ್ರಗತಿಗೆ ಶಿಕ್ಷಣ ಪೂರಕವಾಗಿದೆ ಎಂದರು.
ಬೆಳ್ಳಿ ಮಹೋತ್ಸವ ಸಂಭ್ರಮದಲ್ಲಿರುವ ಭಾಲ್ಕೇಶ್ವರ ಶಾಲೆ ಪಟ್ಟಣದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಭದ್ರ ಬುನಾದಿ ಒದಗಿಸುತ್ತಿದೆ. ಇದೀಗ ಈ ಶಾಲೆಗೆ ಸುಸಜ್ಜಿತ ಸ್ವಂತ ಕಟ್ಟಡ ಲಭಿಸಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ರ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹವಾ ಮಲ್ಲಿನಾಥ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಚಾಣಕ್ಯ ಅಕಾಡೆಮಿ ಸಂಸ್ಥೆಯ ಸಂಸ್ಥಾಪಕ ಎನ್.ಎಂ.ಬಿರಾದಾರ, ಯುವ ಮುಖಂಡ ಚೆನ್ನಬಸವಣ್ಣ ಬಳತೆ ಮಾತನಾಡಿದರು. ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಡಾ.ಕ್ರಾಂತಿಕುಮಾರ ಸಿರ್ಸೆ, ಶಾಂತವೀರಯ್ಯ ಎಲ್.ಎಲ್, ಮನೋಹರ ಹೋಳ್ಕರ್, ಸಂದೀಪ ವಾಡೇಕರ, ಮಲ್ಲಿಕಾರ್ಜುನ ಕನ್ನಾಳೆ, ಸಿದ್ದಪ್ಪ ಚಳಕಾಪುರೆ, ಶಿವಶರಣಯ್ಯ ಸ್ವಾಮಿ, ಶಿವಕುಮಾರ ಪಾಟೀಲ್, ಗೋವಿಂದರಾವ ಭಾಲ್ಕೆ, ಸುನಿತಾ ಸಂಗೋಳಗೆ, ಸುಮನಬಾಯಿ ಜಲ್ದೆ, ಶೃತಿ, ಸಂತೋಷ ಖಂಡ್ರೆ, ವಿಜಯಕುಮಾರ ಭುಸಗುಂಡೆ, ಸಂಜೀವಕುಮಾರ ಜ್ಯಾಂತೆ ಇತರರಿದ್ದರು.
ಸೃಷ್ಟಿ ಸಂಗಡಿಗರು ವಚನ ನೃತ್ಯ ನಡೆಸಿಕೊಟ್ಟರು. ಬಾಲಾಜಿ ಬಿರಾದಾರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.