ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ

ಕಮತಗಿ ಪಟ್ಟಣದ ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಒಕ್ಕೂಟ ಹಾಗೂ ಪಠ್ಯೇತರ ಚಟುವಟಿಕೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸಜ್ಜನ ಮಾತನಾಡಿದರು. ಮುರುಗೇಶ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಹುಚ್ಚಪ್ಪ ಸಿಂಹಾಸನ ಇತರರಿದ್ದರು.
ಕಮತಗಿ ಪಟ್ಟಣದ ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಒಕ್ಕೂಟ ಹಾಗೂ ಪಠ್ಯೇತರ ಚಟುವಟಿಕೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸಜ್ಜನ ಮಾತನಾಡಿದರು. ಮುರುಗೇಶ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಹುಚ್ಚಪ್ಪ ಸಿಂಹಾಸನ ಇತರರಿದ್ದರು.
Published on

ಕಮತಗಿ: ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಪ್ರಾಥಮಿಕ ಹಂತದಲ್ಲೇ ಶಿಸ್ತು, ಸಂಯಮ ಪ್ರಜ್ಞೆ, ನಾಯಕತ್ವದ ಗುಣಗಳನ್ನು ಬೆಳೆಸಲು ಮುಂದಾಗಬೇಕೆಂದು ಹುನಗುಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಮಾತೋಶ್ರೀ ಬಂದವ್ವ ವೀರಪ್ಪ ಕಡ್ಲಿಮಟ್ಟಿ ಎಜ್ಯುಕೇಶನ್ ಮತ್ತು ರೂರಲ್ ಸೋಷಿಯಲ್ ವೆಲ್‌ಫೇರ್ ಟ್ರಸ್ಟ್‌ನ ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಒಕ್ಕೂಟ ಹಾಗೂ ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೇವಲ ಒಂದೇ ರಂಗಕ್ಕೆ ಸೀಮಿತರಾಗದೆ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಾನ್ವಿತರಾಗಿರುತ್ತಾರೆ. ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಅಭಿರುಚಿಗಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯಲ್ಲಿ ತೊಡಗಿದಾಗ ಮಾತ್ರ ಕಲಿಕೆ ಸಾರ್ಥಕ ಪಡೆದುಕೊಳ್ಳುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆಗಳನ್ನು ಓದುವ ಅಭ್ಯಾಸ ಅಳವಡಿಸಿರುವ ಕಾರ್ಯ ಶ್ಲಾಘನೀಯ ಎಂದರು.

ವಲಯ ಸಂಪನ್ಮೂಲ ವ್ಯಕ್ತಿ ಪಿ. ಎಸ್. ಚವ್ಹಾಣ್ ಮಾತನಾಡಿ, ತರಗತಿಯ ಕೊಠಡಿಗಿಂತ ಹೊರಗಡೆ ನಡೆಯುವ ಕಲಿಕಾ ಚಟುವಟಿಕೆ ಮಕ್ಕಳ ಮನಸ್ಸನ್ನು ಅರಳಿಸುತ್ತವೆ. ಜತೆಗೆ ಅವರಲ್ಲಿರುವ ಪ್ರತಿಭೆ ಹೊರತೆಗೆಯಲು ಇಂತಹ ಕಾರ್ಯಕ್ರಮಗಳು ಮುಖ್ಯವೇದಿಕೆಯಾಗಿವೆ ಎಂದರು.

ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಜಮಖಂಡಿ, ಹೊಳೆ ಹುಚ್ಚೇಶ್ವರ ಬ್ಯಾಂಕ್ ನಿರ್ದೇಶಕ ಹುಚ್ಚಪ್ಪ ಸಿಂಹಾಸನ, ಶಾಲೆ ಮುಖ್ಯಶಿಕ್ಷಕ ಸಂಜೀವ ದೇಸಾಯಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net