ಮಕ್ಕಳ ಕಣ್ಣಿನ ಕಾರ್ಯಕ್ಷಮತೆ ಪರೀಕ್ಷಿಸಿ

19 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಚಿಕ್ಕವರಿದ್ದಾಗಲೇ ದೃಷ್ಠಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು. ಬೆಳವಣಿಗೆ ಆದಂತೆ ದೃಷ್ಠಿ ಜತೆಗೆ ಮಿದಳೂ ವಿಕಸನಗೊಳ್ಳುತ್ತದೆ. ಸಮಸ್ಯೆ ಇದ್ದಲ್ಲಿ ಬೇಗನ ಗುಣಪಡಿಸಿ ಮಕ್ಕಳಿಗೆ ಭವಿಷ್ಯದಲ್ಲಾಗುವ ಕಣ್ಣಿನ ಸಮಸ್ಯೆ ನಿವಾರಿಸಬಹುದು ಎಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಮಹಾವಿದ್ಯಾಲಯ ನಿರ್ದೇಶಕ ಡಾ. ಆರ್. ಕೃಷ್ಣ ಪ್ರಸಾದ ಹೇಳಿದರು.
ನಗರದ ಜನತಾ ಶಿಕ್ಷಣ ಸಮಿತಿಯ 50ನೇ ವರ್ಷಾಚರಣೆ ನಿಮಿತ್ತ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಚಿಕ್ಕ ಮಕ್ಕಳ ಅಂಧತ್ವ ಪರೀಕ್ಷೆ ಕುರಿತು ಜೆಎಸ್‌ಎಸ್ ಶಾಲಾ ಶಿಕ್ಷಕರಿಗೆ ಶನಿವಾರ ಆಯೋಜಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲದಲ್ಲಿ 1 ಕೋಟಿ ಮಕ್ಕಳಲ್ಲಿ 40 ಲಕ್ಷ ಮಕ್ಕಳಿಗೆ ಕಣ್ಣಿನ ಸಮಸ್ಯೆ ಇದೆ. ಅದರಲ್ಲಿ ಶೇ. 80ರಷ್ಟು ಮಕ್ಕಳ ಅಂಧತ್ವವನ್ನು ಸುಲಭ ವಿಧಾನದಿಂದ ತಡೆಯಬಹುದು. ಅದು ಶಿಕ್ಷಕರಿಂದ ಸಾಧ್ಯ. ಮಕ್ಕಳ ಮೇಲೆ ಕಾಳಜಿ ತೋರಿ ಪರೀಕ್ಷಿಸಿ ಕಣ್ಣಿನ ಕಾರ್ಯಕ್ಷಮತೆ ಸರಿಯಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲದಿದ್ದರೆ ಪಾಲಕರಿಗೆ ಚಿಕಿತ್ಸೆ ಮಾಡಿಸುವ ಬಗ್ಗೆ ಸೂಚಿಸಿ ಎಂದರು.
ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಮಕ್ಕಳನ್ನು ಕಾಳಜಿಯಿಂದ ಬೆಳೆಸುವ ಜವಾಬ್ದಾರಿ ಶಿಕ್ಷಕರದ್ದು. ಶಿಕ್ಷಕರಿಗೆ ಇಂತಹ ತರಬೇತಿ ನೀಡಿದರೆ ಮಕ್ಕಳಲ್ಲಿರುವ ಕುಂದುಕೊರತೆ ಪತ್ತೆ ಮಾಡಿ ಅವರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು. ಸಂಸ್ಥೆಯಲ್ಲಿನ 8000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವೈದ್ಯರು ಪರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರು ಪ್ರಾಥಮಿಕ ಪರೀಕ್ಷೆ ನಡೆಯಿಸಿ, ಸಮಸ್ಯೆಗಳಿದ್ದಲ್ಲಿ ವೈದ್ಯರಿಗೆ ಶಿಫಾರಸ್ಸು ಮಾಡುವ ಮೂಲಕ ಮಕ್ಕಳ ಅಂಧತ್ವ ನಿವಾರಣೆ ಮಾಡುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು.
ಜೋಶಿ ಕಣ್ಣಿನ ಆಸ್ಪತ್ರೆಯ ಹರೀಶ. ಎಂ., ಇತರರು ಇದ್ದರು. ಸಂಸ್ಥೆಯ ವಿವಿಧ ಶಾಲೆಗಳ 102 ಶಿಕ್ಷಕರು ತರಬೇತಿಯ ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net