ಮಂದಿರ ನಿರ್ಮಾಣ ಧನ್ಯತಾಭಾವ ; ಧರ್ಮದ ಅಸ್ತಿತ್ವಕ್ಕಾಗಿ ಕರಸೇವಕರು ಹೋರಾಡಿದ್ದು ಎಂದ ಸೊಗಡುಶಿವಣ್ಣ

04Tmk_Sogadu_Karaseve
Published on

ತುಮಕೂರು: ನಾವು ಅಂದು ಧರ್ಮದ ಅಸ್ತಿತ್ವಕ್ಕಾಗಿ ಜೀವವನ್ನೇ ಬದಿಗಿಟ್ಟು ಅಯೋಧ್ಯೆಗೆ ಹೋಗಿದ್ದೆವು. ರಾಮಮಂದಿರ ನಿರ್ಮಾಣದ ಕಾರ್ಯ ಆರಂಭವಾಗುತ್ತಿರುವುದು ನಮ್ಮೆಲ್ಲರಲ್ಲಿ ಧನ್ಯತಾಭಾವ ಮೂಡಿಸಿದೆ ಎಂದು ಮಾಜಿ ಸಚಿವ, ಕರಸೇವಕ ಸೊಗಡು ಶಿವಣ್ಣ ಹೇಳಿದರು.

1992ರಲ್ಲಿ ಜಿಲ್ಲೆಯಿಂದ 57 ಮಂದಿ ಕರಸೇವಕರು ಅಂದಿನ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಕಾ.ಬೋರಪ್ಪ ಅವರ ನೇತೃತ್ವದಲ್ಲಿ ತುಮಕೂರಿನಿಂದ ನವೆಂಬರ್ 26ರಂದು ಅಯೋಧ್ಯೆಯತ್ತ ಪಯಣಬೆಳೆಸಿದ್ದೆವು. ಕರಸೇವೆಗೆ ತೆರಳಿದ್ದವರಲ್ಲಿ ಈಗ 22 ಮಂದಿ ನಮ್ಮನ್ನು ಅಗಲಿದ್ದು, ಈ ಸಂದರ್ಭದಲ್ಲಿ ಅವರೆಲ್ಲ ಇದ್ದಿದ್ದರೆ ಸಂಭ್ರಮ ಹೆಚ್ಚಿರುತ್ತಿತ್ತು. ಸ್ವರ್ಗವಾಸಿಗಳಿಗೆಲ್ಲರ ಆತ್ಮಕ್ಕೂ ಈಗ ಶಾಂತಿಸಿಕ್ಕಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ರಾಮಜನ್ಮಭೂಮಿ ಹೋರಾಟ ಹಂಚಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸುತ್ತಿರುವುದು ಹೆಮ್ಮೆಯ ಸಂಗತಿ. ರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಲಾಲ್ ಕೃಷ್ಣಆಡ್ವಾಣಿ ಅವರು ಅಂದು ದೇಶಾದ್ಯಂತ ಹಮ್ಮಿಕೊಂಡಿದ್ದ ರಥಯಾತ್ರೆಯ ರೂವಾರಿ ಮೋದಿ ಆಗಿದ್ದರು. ತೆರೆಮರೆಯಲ್ಲಿ ನಿಂತು ರಥಯಾತ್ರೆ ಯಶಸ್ಸಿಗೆ ಕಾರಣೀಭೂತರಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣವಾಗಿತ್ತು. ಕರಸೇವಕರು ಎಂದೂ ಅಧಿಕಾರ ಬಯಸಿದವರಲ್ಲ ಎಂದರು. ಧರ್ಮದ ಅಸ್ತಿತ್ವಕ್ಕಾಗಿ ಅಯೋಧ್ಯೆಗೆ ತೆರಳಿದ್ದೆವು. ದೇಶ ಭಕ್ತರು, ರಾಮಭಕ್ತರು ರಾಮಜನ್ಮಭೂಮಿ ಸ್ಥಳಕ್ಕೆ ತೆರಳಿದ್ದೆವು. ಡಿಸೆಂಬರ್ 6 ರ ಘಟನೆ ಇನ್ನೂ ಕಣ್ಮುಂದೆ ಇದೆ. ಲಕ್ಷಾಂತರ ಕರಸೇವಕರು ಅಲ್ಲಿ ಸೇರಿದ್ದರು. ನೋಡನೋಡುತ್ತಿದ್ದಂತೆಯೇ ಭದ್ರತಾಕೋಟೆ ಭೇದಿಸಿದ ಕರಸೇವಕರು ವಿವಾದಿತ ಕಟ್ಟಡ ಏರಿ ಧ್ವಂಸಗೊಳಿಸಿದ್ದರು. ಬೆಳಗಾಗುವ ಹೊತ್ತಿಗೆ ಶ್ರೀರಾಮನ ಮೂರ್ತಿ ಪ್ರತಿಷ್ಟಾಪಿಸಿಬಿಟ್ಟಿದ್ದರು. ಬಾಬರ್‌ನ ಆಕ್ರಮಣಕ್ಕೆ ಕೊಟ್ಟ ಉತ್ತರ ಇದಾಗಿತ್ತು ಎಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಕರಸೇವಕರಾದ ಕೆ.ಪಿ.ಮಹೇಶ್, ಸಾಗರನಹಳ್ಳಿ ನಂಜೇಗೌಡ, ಹೆಚ್.ಕೆ. ಶಿವಣ್ಣ, ಸತ್ಯಮಂಗಲ ಸದಾಶಿವಯ್ಯ, ಸಿದ್ದರಾಮಯ್ಯ, ವೇದಮೂರ್ತಿ, ಮೇರುನಾಥ್, ಅ.ನ.ಲಿಂಗಪ್ಪ, ಸಂಪಿಗೆಶ್ರೀಧರ್, ನಾಗಭೂಷಣ್ ಮೊದಲಾದವರು ಇದ್ದರು.

ಶಿವಣ್ಣಗೆ ಗುಂಡೇಟು ಬಿದ್ದಿದೆ!: 1992ರ ಡಿಸೆಂಬರ್ 6ರಂದು ಅಯೋಧ್ಯೆಯ ವಿವಾದಿತ ಕಟ್ಟಡ ನೆಲಸಮಗೊಂಡ ಬಳಿಕ ಮರುದಿನ ನಾವೆಲ್ಲ ನಮ್ಮೂರುಗಳಿಗೆ ಮರಳಲು ರೈಲ್ವೆ ನಿಲ್ದಾಣಗಳತ್ತ ಹೆಜ್ಜೆ ಹಾಕಿದ್ದೆವು. ಈ ಸಂದರ್ಭದಲ್ಲಿ ನಾನು ಮತ್ತು ಕೆಲವರು ಗುಂಪಿನಿಂದ ಬೇರ್ಪಟ್ಟೆವು. ತುಮಕೂರಿಗೆ ಬಂದಿದ್ದ ಮೊದಲ ಬ್ಯಾಚ್‌ನ ಸದಸ್ಯರು ಶಿವಣ್ಣನಿಗೆ ಗುಂಡೇಟು ಬಿದ್ದಿದೆ ಎಂದು ಪುಕಾರು ಎಬ್ಬಿಸಿಬಿಟ್ಟಿದ್ದರು. ಸಹಜವಾಗಿ ಮನೆಯವರೆಲ್ಲ ಆತಂಕಗೊಂಡಿದ್ದರು. 2 ದಿನಗಳ ನಂತರ ಊರಿಗೆ ಮರಳಿದಾಗ ಮನೆಯವರೆಲ್ಲ ಕಣ್ಣೀರಾಗಿದ್ದರು ಎಂದು ಸೊಗಡು ಹೋರಾಟ ಮೆಲುಕುಹಾಕಿದರು.

ಬಿಎಸ್‌ವೈ ಚೇತರಿಕೆಗೆ ಪಾದಯಾತ್ರೆಗೆ ಸಜ್ಜು : ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಅವರ ಕುಟುಂಬದವರಿಗೆ ಕರೊನಾ ತಗುಲಿರುವ ಹಿನ್ನೆಲೆಯಲ್ಲಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ತುಮಕೂರು ನಗರದಿಂದ ಕುಣಿಗಲ್ ತಾಲೂಕು ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆಯನ್ನು ಬುಧವಾರ ಕೈಗೊಂಡಿದ್ದಾರೆ, ನವೀನ್, ಬಸವರಾಜ್, ಗೌತಮ್, ಮೋಹನ್‌ಕುಮಾರ್ ಎಡೆಯೂರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಕರೊನಾ ಪಾಸಿಟಿವ್ ಬಂದಿದ್ದು ಬೇಗ ಗುಣಮುಖರಾಗಲಿ ಎಂದು ಸೊಗಡು ಶಿವಣ್ಣ ಹೇಳಿದರು.

ಉತ್ತರ ಪ್ರದೇಶದ ಸರ್ಕಾರ ಕಾರ್ಯಕ್ರಮ ರೂಪಿಸಿದ್ದು ಯಾರನ್ನು ಆಹ್ವಾನಿಸಬೇಕೋ ಅವರನ್ನು ಆಹ್ವಾನಿಸಿದೆ. ನಮ್ಮ ವಿರುದ್ಧ ಕೇಸ್ ಹಾಕಿದ್ದವರನ್ನೂ ಆಹ್ವಾನಿಸಲಾಗಿದೆ. ಆಹ್ವಾನ ನೀಡದೇ ಇದ್ದರೂ ಪ್ರಿಯಾಂಕಾಗಾಂಧಿ ಹೋಗುತ್ತೇನೆ ಎಂದರೆ ಅದು ಉದ್ಧಟತನ. ಶಿಲಾನ್ಯಾಸ ಕಾರ್ಯಕ್ರಮ ಮುಗಿದ ಮೇಲೆ ಹೋಗಲಿ, ನಮ್ಮ ಅಭ್ಯಂತರವಿಲ್ಲ. ಸೊಗಡುಶಿವಣ್ಣ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net