ಮಂತ್ರಿ ಸ್ಥಾನಕ್ಕಿಂತ ನೀರಾವರಿಗೆ ಹೆಚ್ಚು ಅನುದಾನ ನೀಡಿ

25SAMBARAGI1
ಚಮಕೇರಿ ಗ್ರಾಮದಲ್ಲಿ ಎಸ್.ಸಿ.ಪಿ ಯೋಜನೆಯಡಿ 1 ಕೋಟಿ ರೂ. ವೆಚ್ಚದ ಅನುದಾನದಲ್ಲಿ ವಿವಿಧ ಅಭಿವದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಶಿವಾನಂದ ಗೋಲಭಾವಿ, ನಿಂಗಪ್ಪ ಖೋಕಲೆ, ವಿನಾಯಕ ಬಾಗಡಿ ಇತರರು ಇದ್ದರು.
Published on

ಸಂಬರಗಿ: ನನಗೆ ಮಂತ್ರಿ ಸ್ಥಾನಕ್ಕಿಂತ ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಪೂರ್ಣಗೊಳ್ಳಲು ಬೇಕಾದ ಅನುದಾನ ನೀಡಿ ಎಂದು ಶಾಸಕ ಶ್ರೀಮಂತ ಪಾಟೀಲ ಆಗ್ರಹಿಸಿದರು.
ಸಮೀಪದ ಚಮಕೇರಿ ಗ್ರಾಮದಲ್ಲಿ ಎಸ್.ಸಿ.ಪಿ ಯೋಜನೆಯಡಿ 1 ಕೋಟಿ ರೂ. ವೆಚ್ಚದ ಅನುದಾನದಡಿ ವಿವಿಧ ಅಭಿವದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗಡಿ ಭಾಗದ ಬರಗಾಲ ಪೀಡಿತ 30 ಗ್ರಾಮಗಳ 22 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಈ ಯೋಜನೆ ಪೂರ್ಣಗೊಂಡಲ್ಲಿ ಸುಮಾರು 1.5 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಉಂಟಾದ ವ್ಯತಿರಿಕ್ತ ಪರಿಣಾಮದಿಂದ ಬಿಹಾರದಿಂದ ಆಗಮಿಸಿದ್ದ ಕೂಲಿಕಾರರು ವಾಪಸ್ಸಾಗಿ ಈ ಯೋಜನೆಗೆ ಹಿನ್ನೆಡೆಯಾಗಿದೆ ಎಂದರು.

ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಡದ ಚಮಕೇರಿ, ಬ್ಯಾಡರಹಟ್ಟಿ, ಮಲಾಬಾದ, ಪಾರ್ಥನಹಳ್ಳಿ, ಗುಂಡೇವಾಡಿ ಸೇರಿದಂತೆ ಅನೇಕ ಗ್ರಾಮಗಳ 23 ಕೆರೆಗಳನ್ನು ತುಂಬಿಸುವ 230 ಕೋಟಿ ರೂ. ಯೋಜನೆಯ ಮಂಜೂರಾತಿಗಾಗಿ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಯೋಜನೆಗೂ ಮಂಜೂರಾತಿ ದೊರಕಲಿದೆ ಎಂದರು. ಕಾಗವಾಡ ಮತಕ್ಷೇತ್ರ ರಸ್ತೆ ಅಭಿವದ್ಧಿಗಾಗಿ 500 ಕೋಟಿ ರೂ. ಅನುದಾನ ಬೇಕು. ಈ ಪೈಕಿ ಈಗಾಗಲೇ 90 ಕೋಟಿ ರೂ. ಅನುದಾನ ಮಂಜೂರಾಗಿದೆ. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ಜಿಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿರುವೆ. ಪರಿಸ್ಥಿತಿ ನೋಡಿ ಕುಡಿಯುವ ನೀರಿಗಾಗಿ ಪ್ರಸ್ತಾವನೆ ಸಲ್ಲಿಸುವೆ ಎಂದರು.

ಐನಾಪುರ ಪಟ್ಟಣದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಟಿಎಸ್‌ಪಿ ಯೋಜನೆಯಡಿ ಕಾಮಗಾರಿಗೆ, ಬೇಡರಹಟ್ಟಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಬೇಡರಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಗಳನ್ನು ಶ್ರೀಮಂತ ಪಾಟೀಲ ಉದ್ಘಾಟಿಸಿದರು.

ಬಿಜೆಪಿ ಧುರೀಣರಾದ ಶಿವಾನಂದ ಗೋಲಬಾವಿ, ನಿಂಗಪ್ಪ ಖೋಕಲೆ, ವಿನಾಯಕ ಬಾಗಡಿ, ರಾಮು ಸೊಡ್ಡಿ, ಭಾವು ಪತ್ತಾರ, ಚಮಕೇರಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಪಡುವಲಕರ, ಉಪಾಧ್ಯಕ್ಷೆ ಅನಿತಾ ಕಾಂಬಳೆ, ಸದಸ್ಯರಾದ ಜ್ಯೋತಿಬಾ ಸೂರ್ಯವಂಶಿ, ಕಾಶೀನಾಥ ಬಿರಾದಾರ, ರಮೇಶ ಮಂಗರೂಳ, ರೇಖಾ ಮಂಗರೂಳ, ರವಿಕಾಂತ ಪಾಟೀಲ, ಅರ್ಜುನ ನಾಯಿಕ, ಶ್ರೀಮಂತ ಯಳವಂಕಿ, ಬಸು ನಾಯಿಕ, ಪಿಡಿಒ ವಿಜಯಲಕ್ಷ್ಮೀ ವಂಟಮೂರಿ, ಶಂಕರ ಮದಣ್ಣವರ, ರಾಜು ಅಲಬಾಳ, ಬಾಲಚಂದ್ರ ಚವ್ಹಾಣ, ಸುಭಾಷ ಮಾಳಿ, ವಿಠ್ಠಲ ಸಂಕ್ರಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net