ಮಂತ್ರಿ ಬೆಂಬಲಕ್ಕೆ ನಿಲ್ಲುವಂತೆ ಕಾಂಗ್ರೆಸ್ ಪಟ್ಟು

ctd sudaker--01
Published on

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಸಚಿವ ಡಿ.ಸುಧಾಕರ್ ವಿರುದ್ಧ ದಾಖಲಾಗಿರುವ ದೂರು ರಾಜಕೀಯ ಪಿತೂರಿಯಾಗಿದ್ದು, ಅವರ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲ್ಲಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಸಚಿವರ ಪ್ರಕರಣ ಕೂಲಂಕುಷವಾಗಿ ಪರಿಶೀಲಿಸಿ ಅವರ ಬೆಂಬಲಕ್ಕೆ ರಾಜ್ಯ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಿದರು.
ಸಚಿವರ ವಿರುದ್ಧ ಜಾತಿ ನಿಂದನೆ, ಭೂ ಕಬಳಿಕೆ ಹಾಗೂ ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣ ದಾಖಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಈ ರೀತಿ ಮಾಡಲು ಸಾಧ್ಯವಿಲ್ಲ. ಅವರನ್ನು ತೇಜೋವಧೆ ಮಾಡಲು ಆಧಾರರಹಿತ ಆರೋಪ ಮಾಡಲಾಗಿದೆ ಎಂದು ದೂರಿದರು.
ಕಾನೂನು ವ್ಯವಸ್ಥೆ ಮೇಲೆ ಗೌರವವಿದ್ದು, ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಸ್ವತಃ ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಜೈನ ಸಮುದಾಯದ ಏಕೈಕ ಸಚಿವರಾಗಿದ್ದು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಅವರಿಗೆ ನ್ಯಾಯ ದೊರಕಿಸಿಕೊಡಿ ಎಂದು ಕೋರಿದರು.
ಪದಾಧಿಕಾರಿಗಳಾದ ಮರುಳಾರಾಧ್ಯ, ಟಿ.ಎಲ್.ಮಂಜುನಾಥ್, ಕಾರೇಹಳ್ಳಿ ಉಲ್ಲಾಸ್, ಎಂ.ಎಲ್.ಅನಿಲ್‌ಕುಮಾರ್, ಎನ್.ಡಿ.ಕುಮಾರಸ್ವಾಮಿ, ಫಾರೂಕ್, ಮಹಮ್ಮದ್ ಹಸನ್ ತಹೀರ್, ಡಿ.ಮಂಜುನಾಥ್, ಮಧು ಶ್ರೀನಿವಾಸ್, ಎಚ್.ಅಜಿತ್, ಎಂ.ಶಿವರಾಜ್, ಪಾಂಡುರಂಗಪ್ಪ, ಕೆ.ಸುರಜ್, ಸದ್ದಮ್, ಗುರುಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net