

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 352ನೇ ಆರಾಧನಾ ಮಹೋತ್ಸವ ನಿಮಿತ್ತ ಏಳು ದಿನಗಳ ಕಾಲ ಹಮ್ಮಿಕೊಂಡಿದ್ದ ಸಪ್ತ ರಾತ್ರೋತ್ಸವ ಕಾರ್ಯಕ್ರಮ ಸೋಮವಾರ ಮುಕ್ತಾಯಗೊಂಡಿದೆ.
ಶ್ರೀಮಠದ ಸಂಪ್ರದಾಯದಂತೆ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಮಂತ್ರಾಲಯ ಸಮೀಪದ ತುಂಗಭದ್ರಾ ಗ್ರಾಮದಲ್ಲಿರುವ ರಾಯರ ಮೃತಿಕಾ ಬೃಂದಾವನಕ್ಕೆ ವಿಶೇಷ ಮಂಗಳಾರತಿ ನಡೆಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥೋತ್ಸವ ನೆರವೇರಿಸಲಾಯಿತು.
ಮಂತ್ರಾಲಯದಲ್ಲಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದ್ದು, ಸರ್ವ ಸಮರ್ಪಣೋತ್ಸವ ನೆರವೇರಿಸುವ ಮೂಲಕ ಸಪ್ತ ರಾತ್ರೋತ್ಸವವನ್ನು ವಿದ್ಯುಕ್ತವಾಗಿ ಸಮಾಪ್ತಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಕೆ.ಎಸ್.ಜವಾಹರರೆಡ್ಡಿ, ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಆಡಳಿತಾಕಾರಿ ಮಾಧವಶೆಟ್ಟಿ ಉಪಸ್ಥಿತರಿದ್ದರು.