ಮಂತ್ರ ಮುಗ್ಧಗೊಳಿಸಿದ ನಂದಿ ಶಿವೋತ್ಸವ;ಕಾರ್ಯಕ್ರಮದ ಮೆರುಗು ಹೆಚ್ಚಿಸಿದ ಕಲಾವಿದರು

1111
Published on

ಚಿಕ್ಕಬಳ್ಳಾಪುರ: ಕಾಶಿ ಮಾದರಿಯ ಗಂಗಾರತಿ ವೀಕ್ಷಣೆ, ಮಹಾರುದ್ರನ ಆರಾಧನೆ, ಕಿವಿ ತುಂಬುವ ಇಂಪಾದ ಗಾಯನ, ಮೈ ನವಿರೇಳಿಸುವ ನೃತ್ಯ, ಖ್ಯಾತನಾಮ ಕಲಾವಿದರಿಂದ ನಾನಾ ಕಲೆಗಳ ಪ್ರದರ್ಶನ, ಕಿಕ್ಕಿರಿದ ಜನರಿಂದ ಶಿಳ್ಳೆ, ಚಪ್ಪಾಳೆ....

ಇವು ಕಲೆ ಮತ್ತು ವಾಸ್ತುಶಿಲ್ಪದಿಂದ ಬೆರಗು ಮೂಡಿಸುವ ನಂದಿಯ ಭೋಗನಂದೀಶ್ವರ ದೇವಾಲಯದಲ್ಲಿ ನಡೆದ ಶಿವೋತ್ಸವದಲ್ಲಿ ಕಂಡು ಬಂದ ಕ್ಷಣಗಳು. ಶಂಖನಾದ, ರುದ್ರನ ಸ್ಮರಣೆ, ಮಂತ್ರ ಪಠಣ, ಗೀತೆಗಳ ಗಾಯನ, ನೃತ್ಯ, ನಾಟಕ ಪ್ರದರ್ಶನ, ವಾದ್ಯ ನುಡಿಸುವಿಕೆ ಸೇರಿ ನಿರಂತರ 12 ಗಂಟೆ ಅವಧಿ ನಡೆದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಮ್ಮೋಹನ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಜನರನ್ನು ಮಂತ್ರ ಮುಗ್ಧಗೊಳಿಸಿದವು. ಮಹಾಶಿವರಾತ್ರಿ ಹಬ್ಬದ ಇಡೀ ರಾತ್ರಿ ಆಕರ್ಷಕ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ಜಾಗರಣೆ ಆಚರಿಸಿದರು.

ಮೊದಲು ವಾರಣಾಸಿಯ ಗಂಗಾರತಿ ತಂಡದಿಂದ ಶಿವಸ್ತುತಿಯ ನಡುವೆ ಮಹಾಶಿವನಿಗೆ ಆರತಿ ಎತ್ತಿದ್ದ ದೃಶ್ಯಕ್ಕೆ ಜನರು ಭಕ್ತಿಪರವಶವಾದರು. ಗಾಯಕಿ ಅನನ್ಯ ಭಟ್‌ರ ‘ಸೋಜಿಗದ ಸೂಜು ಮಲ್ಲಿಗೆ’, ಗಾಯಕ ಹರಿಹರನ್‌ರ ‘ಹರಹರ ಮಹಾದೇವ’, ಗಾಯಕ ರಘು ದೀಕ್ಷಿತ್‌ರ ‘ನಿನ್ನ ಪೂಜೆಗೆ ಬಂದೆ ಮಹದೇಶ್ವರ’, ಗಾಯಕ ವಿಜಯ್ ಪ್ರಕಾಶ್‌ರ ‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ’ ಸೇರಿ ನಾನಾ ಹಾಡುಗಳ ಗಾಯನ ನಡೆಯಿತು. ಹಾಡು ಮುಗಿಯುತ್ತಿದ್ದಂತೆ ಚಪ್ಪಾಳೆ, ಶಿಳ್ಳೆಯ ಮೂಲಕ ಜನರು ನೆಚ್ಚಿನ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಖ್ಯಾತ ನಟಿ ಮತ್ತು ನೃತ್ಯ ಕಲಾವಿದೆ ಲಕ್ಷ್ಮೀಗೋಪಾಲಸ್ವಾಮಿ ಅವರಿಂದ ಭರತನಾಟ್ಯ, ಸೇಮ್ ಡ್ಯಾನ್ಸ್ ತಂಡದಿಂದ ಅರ್ಧನಾರೀಶ್ವರ ನೃತ್ಯ, ಭರತನಾಟ್ಯದ ನಾನಾ ಶೈಲಿಗಳ ಮಿಶ್ರಣದ ಸಂಕಲನ್ ನೃತ್ಯ, ಶಿವ ತಾಂಡವ ನೃತ್ಯ, ಅಯಾನ್ ತಂಡದಿಂದ ಶರಣು ಶರಣು ಶಿವನೇ ನೃತ್ಯ ಪ್ರದರ್ಶನ ಆಕರ್ಷಕವಾಗಿ ಮೂಡಿಬಂತು.

ಶಿವನ ಸ್ವರೂಪ ದರ್ಶನ: ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಕೇರಳದ ಚಂಡೆ ವಾದನವು, ಲೇಸರ್ ಶೋನಲ್ಲಿ ಶಿವನ ಸ್ವರೂಪ ದರ್ಶನ, ಶಿವನೃತ್ಯ ಎಲ್ಲರ ಮನಸೋಲಿಸಿತು. ಹಾಸ್ಯ ಭಾಷಣಕಾರ ಪ್ರೊ.ಕೃಷ್ಣೇಗೌಡ ನೇತೃತ್ವದಲ್ಲಿ ನಗೆಹಬ್ಬ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿತು. ಮೈಸೂರು ದಸರಾ ಹಾಗೂ ಹಂಪಿ ಉತ್ಸವ ಮಾದರಿಯಲ್ಲಿ ಶಿವೋತ್ಸವವು ಅದ್ದೂರಿಯಾಗಿ ಮೂಡಿ ಬಂತು. ಇಡೀ ರಾತ್ರಿ ಸಾವಿರಾರು ಜನರನ್ನು ಒಂದೆಡೆ ಸೆಳೆದು ಕೂರಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮವನ್ನು ನಟ ಅಕುಲ್ ಬಾಲಾಜಿ ಹಾಗೂ ನಿರೂಪಕಿ ಅನುಪಮಾ ಭಟ್ ನಡೆಸಿಕೊಟ್ಟರು.

ಕರೊನಾದಿಂದ ಕಲಾ ಪ್ರದರ್ಶನವಿಲ್ಲದೆ ಮನೆಯಲ್ಲಿಯೇ ತಿಂಗಳಾನುಗಟ್ಟಲೆ ಕೂರಬೇಕಾಯಿತು. ಇದರಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಲು ಬಯಸಿದ್ದೆ. ಆದರೆ, ಶಿವೋತ್ಸವದಲ್ಲಿ ಸಿಕ್ಕಿದ ಕಾರ್ಯಕ್ರಮ ನಡೆಸಿಕೊಡುವ ಅವಕಾಶವು ಮತ್ತೆ ಹೊಸ ಶಕ್ತಿ ತುಂಬಿದೆ. ಲಕ್ಷ್ಮೀಗೋಪಾಲಸ್ವಾಮಿ, ಖ್ಯಾತ ನಟಿ ಮತ್ತು ನೃತ್ಯ ಕಲಾವಿದೆ ***** ನಂದಿ ಬೆಟ್ಟದ ತಪ್ಪಲಿನಲ್ಲಿ ನಡೆದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗಿನ ಶಿವೋತ್ಸವ ವಿಶೇಷ ಮುದ ನೀಡಿದೆ. ಜನರಿಗೂ ರಸದೌತಣ ಉಣಬಡಿಸಿದೆ. ಹರ್ಷಿಕ ಪೂರ್ಣಚ್ಛ, ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net