ಮಂಡ್ಯದಲ್ಲಿ ನೂತನ ಕೃಷಿ ವಿವಿ ಗೆ ಹಾಸನ ಕೃಷಿ ಕಾಲೇಜು ಸೇರ್ಪಡೆಗೆ ವಿರೋಧ

ಮಂಡ್ಯದಲ್ಲಿ ನೂತನ ಕೃಷಿ ವಿವಿ ಗೆ ಹಾಸನ ಕೃಷಿ ಕಾಲೇಜು ಸೇರ್ಪಡೆಗೆ ವಿರೋಧ
Published on

ಹಾಸನ: ಮಂಡ್ಯದಲ್ಲಿ ನೂತನ ಕೃಷಿ ವಿವಿ ಸ್ಥಾಪಿಸಿ, ಹಾಲಿ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿರುವ ಹಾಸನ ಕೃಷಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರಗಳನ್ನು ಹೊಸ ವಿವಿಗೆ ಸೇರಿಸಲು ಪ್ರಯತ್ನ ನಡೆಯುತ್ತಿದ್ದು, ಇದನ್ನ ಕೈ ಬಿಡದಿದ್ದರೆ, ಉಗ್ರ ಹೋರಾಟ ನಡೆಸುವುದ್ದಾಗಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್. ನಾರಾಯಣಗೌಡ ಎಚ್ಚರಿಸಿದರು.
ರಾಜ್ಯ ಸರ್ಕಾರದ ಈ ನಡೆಗೆ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಅವಕಾಶ ಕೊಡದೆ ಹೋರಾಟ ಮಾಡಬೇಕು .1964ರಲ್ಲಿ ಸ್ಥಾಪನೆಯಾದ ಬೆಂಗಳೂರು ವಿವಿ, ವಿಶ್ವಪ್ರಸಿದ್ಧಿ ಪಡೆದಿದೆ. ತನ್ನದೇ ಇತಿಹಾಸ ಹೊಂದಿದೆ. ಈ ಕಾಲೇಜು ವ್ಯಾಪ್ತಿಯಲ್ಲೇ ಹಾಸನ ಕೃಷಿ ಕಾಲೇಜು ಇರಬೇಕು. ನಮ್ಮ ಜಿಲ್ಲೆಯ ಕಾಲೇಜು ರಾಷ್ಟ್ರೀಯ ಹೆದ್ದಾರಿ 75ರಲ್ಲಿದ್ದು, ಸಾರಿಗೆ ಸಂಚಾರ, ಮೂಲಭೂತ ಸೌಲಭ್ಯ ಎಲ್ಲವೂ ಇದೆ. ಮಂಡ್ಯಕ್ಕೆ ಸೇರಿಸಿದರೆ ವಿದ್ಯಾರ್ಥಿಗಳು ನಾನಾ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು .
ಮೊದಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ನೌಕರರಿಗೆ ಸಂಬಳ ಹಾಗೂ ಪಿಂಚಿಣಿ ಕೊಡಲು ಅನುದಾನ ಇಲ್ಲ. ಅಂಥದ್ದರಲ್ಲಿ 289 ಕೋಟಿ ರೂ. ವೆಚ್ಚದಲ್ಲಿ ನೂತನ ಕೃಷಿ ವಿವಿ ಆರಂಭಿಸುವ ಬದಲು, ಹಾಸನ ಕೃಷಿ ಕಾಲೇಜನ್ನೇ ವಿವಿಯಾಗಿ ಮೇಲ್ದರ್ಜೆಗೆ ಏರಿಸಲಿ ಎಂದು ಒತ್ತಾಯಿಸಿದರು.
ಈ ಬಗ್ಗೆ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಬರುವ ಅಧಿವೇಶನದಲ್ಲಿ ದನಿ ಎತ್ತುವ ಮೂಲಕ ಬೆಂಗಳೂರು ವಿವಿಯಿಂದ ಹಾಸನ ಕಾಲೇಜನ್ನು ಬೇರ್ಪಡಿಸಬಾರದು ಎಂದು ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್‌ಶೆಟ್ಟಿ, ವಿವಿಧ ಪದಾಧಿಕಾರಿಗಳಾದ ಶಕುನಿಗೌಡ, ಆನಂದ್, ಮಹೇಶ್, ನಟರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net