ಮಂಡ್ಯದ ಕೆರಗೋಡು ಗ್ರಾಮದ ಘಟನೆಯನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಮಂಡ್ಯದ ಕೆರಗೋಡು ಗ್ರಾಮದ ಘಟನೆಯನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ
Published on

ಹಾಸನ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಕೆಳಗಿಳಿಸಿದ ಕ್ರಮವನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಲಾಠಿಚಾರ್ಜ್ ಮಾಡಿರುವುದು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನಲೆ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭ ಸ್ಥಾಪಿಸಿ ಹನುಮಾನ್ ಧ್ವಜ ಹಾರಿಸಲಾಗಿತ್ತು. ಗಣರಾಜ್ಯೋತ್ಸವದ ದಿನ ಕೆಳಗಿಳಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಪುನಃ ಹನುಮಾನ್ ಧ್ವಜ ಆರೋಹಣ ಮಾಡಲಾಗಿತ್ತು. ಆದರೆ ಕೆಲವರು ಒಂದು ಧರ್ಮಕ್ಕೆ ಸೀಮಿತವಾದ ಧ್ವಜ ಆರೋಹಣ ಮಾಡುವುದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿ ತಾಲ್ಲೂಕು ಆಡಳಿತಕ್ಕೆ ದೂರು ನೀಡಿದ್ದರು. ಇದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದರು ದೂರಿದರು.
ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಕರೆಯಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಹನುಮ ಧ್ವಜವನ್ನು ಕಾಂಗ್ರೆಸ್‌ನವರು ಧ್ವಂಸ ಮಾಡಿ, ಕೆರಗೋಡು ಗ್ರಾಮದ ಯುವಕರ ಮೇಲೆ ದಬ್ಬಾಳಿಕೆ ನಡೆಸಿ ಲಾಠಿಚಾರ್ಜ್ ಮಾಡಿಸಲಾಗಿದೆ. ಹನುಮಾನ್ ಧ್ವಜದ ವಿಷಯದಲ್ಲಿ ಪೊಲೀಸರು ಸರ್ಕಾರದ ವರ್ತನೆ ಅಕ್ಷಮ್ಯ. ಕಾಂಗ್ರೆಸ್ ಸರ್ಕಾರ ಪೊಲೀಸರಿಂದ ಗುಂಡಾಗಿರಿ ಮಾಡಿಸುತ್ತಿದೆ. ರಾಮಮಂದಿರದ ಮುಂದಿನ ಹನುಮ ಧ್ವಜ ತೆಗೆಯಲು ಕಾಂಗ್ರೆಸ್ ಸರ್ಕಾರ ಯಾವ ಹಕ್ಕಿದೆ? ಕರ್ನಾಟಕದಲ್ಲಿರುವುದು ಪ್ರಜಾಪ್ರಭುತ್ವವೋ ಅಥವಾ ತುಘಲಕ್ ಸರ್ಕಾರವೋ? ಹನುಮ ಧ್ವಜ ನಿಷೇಧಿತ ಧ್ವಜವೇ? ಧಾರ್ಮಿಕ ಸ್ವಾತಂತ್ರೃ ಎಂಬುದು ಹಿಂದೂಗಳಿಗಿಲವೇ ಎಂದು ಪ್ರಶ್ನಿಸಿದರು.
ಹಿಂದೂ ವಿರೋಧ ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪದಿಂದ ಜನರ ಭಾವನೆಗಳನ್ನು ಕೆಣಕುವ ಕೆಲಸಕ್ಕೆ ಕೈ ಹಾಕುತ್ತಿದೆ. ಅಧಿಕಾರ ಬಳಸಿಕೊಂಡು ಹಿಂದೂ ಶಕ್ತಿಗಳ ವಿರುದ್ಧ ನಿಮ್ಮ ದಮನಕಾರಿ ನೀತಿ ಬಳಸಲಾಗುತ್ತಿದೆ. ತುಷ್ಟಿಕರಣ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂಗಳ ಭಕ್ತಿ, ನಂಬಿಕೆ, ಅವರ ಶಾಪ ಸುಮ್ಮನೆ ಬಿಡುವುದಿಲ್ಲ. ಹಿಂದೂಗಳ ಮೇಲಿನ ದಮನಕಾರಿ ನೀತಿಗೆ, ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಕೋಮುವಾದಿ, ಜಿಹಾದಿ ಸರ್ಕಾರವೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಅದೇ ಜಾಗದಲ್ಲಿ ಪುನಃ ಹನುಮ ಧ್ವಜವನ್ನು ಹಾರಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಬಲವಂತವಾಗಿ ತೆರವುಗೊಳಿಸಿರುವ ಹನುಮ ಧ್ವಜವನ್ನು ಪುನಃ ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಬಿಜೆಪಿ ಮುಖಂಡರಾದ ವೇಣುಗೋಪಾಲ್, ಶೋಭನ್ ಬಾಬು, ಚಂದ್ರು, ಪ್ರಸನ್ನ ಕುಮಾರ್, ವೇದಾವತಿ ಮತ್ತಿತರರು ಹಾಜದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net