ಮಂಡೆಕೋಲು ಹಿಂಡಾನೆ ತೋಟಕ್ಕೆ ನುಗ್ಗಿ ಕೃಷಿ ನಾಶ

IMG-20210618-WA0008
Published on

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಪೆರ್ದೋಡಿ, ಮಾವಂಜಿ ಹೊಸೊಕ್ಲು ಭಾಗಕ್ಕೆ ಮತ್ತೆ ಆನೆಗಳ ಉಪಟಳ ಪ್ರಾರಂಭವಾಗಿದ್ದು ಗುರುವಾರ ತಡರಾತ್ರಿ ಆನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ ಮಾಡಿವೆ. 

ಪೆರ್ದೋಡಿ ನಾರಾಯಣ ಶಿಬರೂರಾಯ, ಮಾವಂಜಿ ಹೊಸೊಕ್ಲು ರಾಮಚಂದ್ರ ಗೌಡ, ದಾಸಪ್ಪ ಗೌಡ ಹಾಗೂ ಕೊರಗಪ್ಪ ಗೌಡರ ತೋಟಕ್ಕೆ ನುಗ್ಗಿದ ಆನೆಗಳು ಒಟ್ಟು ಐವತ್ತಕ್ಕೂ ಅಧಿಕ ಬಾಳೆ, ಇಪ್ಪತ್ತೈದು ಅಡಕೆ ಮರ ಹಾಗೂ ಎರಡು ತೆಂಗಿನ ಮರಗಳನ್ನು ಹುಡಿಗೈದಿವೆ. ಅಲ್ಲದೆ ನೀರಿಗಾಗಿ ಅಳವಡಿಸಿದ ಪೈಪ್, ಜೆಟ್ ಗಳನ್ನು ಹಾನಿ ಮಾಡಿವೆ. 

ರಾತ್ರಿ ಸುಮಾರು ೧೧ ಗಂಟೆಗೆ ತೋಟಕ್ಕೆ ನುಗ್ಗಿ ಹುಡಿಗೈಯುವ ಶಬ್ಧ ಕೇಳಿದ ದಾಸಪ್ಪ ಗೌಡರು ಬಳಿಕ ನೆರೆಮನೆಯ ಪಡ್ಪು ದಿನಕರ ಹಾಗೂ ಧನಂಜಯ ಎಂಬವರ ಜೊತೆಗೂಡಿ ಆನೆ ಓಡಿಸಲು ಪ್ರಯತ್ನಪಟ್ಟಿದ್ದಾರೆ. ಅದಾಗಲೇ ಆನೆಗಳು ಪೆರ್ದೋಡಿ ಕಡೆಯಿಂದ ಬಂದು ಅಡಕೆ, ತೆಂಗು ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿದ್ದವು.  ಹಿಂಡಿನಲ್ಲಿ ಮರಿ ಆನೆಯೂ ಸೇರಿ ಒಟ್ಟು ಏಳು ಆನೆಗಳು ಇದ್ದವು ಎಂದು ದಾಸಪ್ಪ ಗೌಡರು ಪತ್ರಿಕೆಗೆ ತಿಳಿಸಿದ್ದಾರೆ.

 ಕೆಲ ದಿನಗಳಿಂದ ಆನೆಗಳ ಉಪಟಳ ತುಸು ಕಡಿಮೆಯಾಗಿದ್ದರೂ ಎರಡು ದಿನಗಳ ಹಿಂದೆ ಗ್ರಾಮದ ಚಾಕೋಟೆ ಜಗದೀಶ್ ನಾಯಕ್ ಎಂಬವರ ತೋಟಕ್ಕೆ ನುಗ್ಗಿ ಕೃಷಿ ನಾಶಗೈದಿದ್ದವು. ಇದೀಗ ಆನೆಗಳ ಹಿಂಡು ಪೆರ್ದೋಡಿ ಭಾಗದತ್ತ ತೆರಳಿ ಕೃಷಿ ನಾಶಗೈದಿವೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net