

ತುಮಕೂರು : ನಗರದ ಮಂಡಿಪೇಟೆಯಲ್ಲಿ ಇತ್ತೀಚೆಗಷ್ಟೇ ಸ್ಮಾರ್ಟ್‌ಸಿಟಿ ಯೋಜನೆಯಡಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆಯ ನಿಜಬಣ್ಣ ಬಯಲಾಗಿದೆ. ಯುಜಿಡಿ ಪೈಪ್ ಒಡೆದ ಪರಿಣಾಮ ಭೂಕುಸಿತವಾಗಿದ್ದು, ದೊಡ್ಡ ಅಪಾಯ ಎದುರಾಗಿದೆ.
ನಗರದ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿರುವ ಮಂಡಿಪೇಟೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಿದ್ದು, ಭೂಕುಸಿತದಿಂದ ಈ ಭಾಗದ ಸಂಪರ್ಕ ಕಡಿತವಾಗಿದೆ, ವ್ಯಾಪಾರಿಗಳು, ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಅಭಿವೃದ್ಧಿಯಾಗಿದ್ದ ರಸ್ತೆಯ ಬದಿಯಲ್ಲೆ ಭೂಕುಸಿತ ಉಂಟಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕುಸಿತವಾದ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳಿಲ್ಲದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ವಿಷಯ ತಿಳಿದು ಪಾಲಿಕೆ ಇಂಜಿನಿಯರ್ ಜತೆಗೆ ಭೇಟಿ ನೀಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಂಡು ಗುಣಮಟ್ಟದಿಂದ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇತ್ತೀಚೆಗಷ್ಟೆ ಸ್ಮಾರ್ಟ್‌ಸಿಟಿ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಈ ಭಾಗದಲ್ಲಿ ಪೈಪ್ ಒಡೆದು ಹೋಗಿರುವುದು ಗೊತ್ತಾಗಿಲ್ಲ ಎಂದರು. 25 ವರ್ಷದ ಯುಜಿಡಿ ಪೈಪ್ ಡ್ಯಾಮೇಜ್ ಆಗಿ ಭೂ ಕುಸಿತವಾಗಿದೆ, ಆಗ ಮಾಡಿದ್ದ ಕಾಮಗಾರಿಯಲ್ಲಿ ಸಿಮೆಂಟ್ ಪೈಪ್‌ಗಳನ್ನು ಹಾಕಲಾಗಿದ್ದು, ಈ ಸಿಮೆಂಟ್ ಮಣ್ಣಿನಲ್ಲಿ ಕರಗಿ ಹೋಗಿ ದೊಡ್ಡ ಗುಂಡಿ ಬಿದ್ದಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಗುಣಮಟ್ಟವನ್ನು ಸಮರ್ಥಿಸಿಕೊಂಡರು.
ನಗರದ ವಿವೇಕಾನಂದ ರಸ್ತೆಯಲ್ಲೂ ಇದೇ ಸಮಸ್ಯೆಯಾಗಿತ್ತು. ಹಾಗಾಗಿ, ಆ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವವರೆಗೂ ರಸ್ತೆ ಕಾಮಗಾರಿಗೆ ಅವಕಾಶ ನೀಡಿರಲಿಲ್ಲ, ರಾಜ್ಯಮಟ್ಟದಿಂದ ಐದಾರು ಮಂದಿ ತಜ್ಞರನ್ನು ಕರೆಸಿ ಸಲಹೆ ಸೂಚನೆ ಪಡೆದು ಈಗ ಕಾಮಗಾರಿ ಮಾಡಲಾಗಿದೆ ಎಂದರು.
ಮಂಡಿಪೇಟೆ ರಸ್ತೆಯ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಚರ್ಚ್ ಸರ್ಕಲ್ ಬಳಿ ಭೂ ಕುಸಿತವಾಗಿತ್ತು. ಆಗ ಪೈಪ್‌ಲೈನ್ ಬದಲಾವಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈ ಜಾಗದಲ್ಲಿ ಪೈಪ್ ಡ್ಯಾಮೇಜ್ ಆಗಿರುವುದು ಯಾರಿಗೂ ಗೊತ್ತಾಗಿಲ್ಲ ಎಂದರು. ಮಂಡಿಪೇಟೆ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ, ಸದಾ ವಾಹನ ದಟ್ಟಣೆ ಇರುತ್ತದೆ. ಹಾಗಾಗಿ ಮುಂದಿನ 15-20 ದಿನದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಮಂಡಿಪೇಟೆ ವ್ಯಾಪಾರಕ್ಕೆ ತೊಡಕು ; ಪ್ರತಿದಿನ ಕೋಟ್ಯಂತರ ರೂ. ವ್ಯವಹಾರ ನಡೆಯುವ ಮಂಡಿಪೇಟೆಯಲ್ಲಿ ಕೆಲಕಾಲ ವ್ಯಾಪಾರ ಸ್ಥಗಿತವಾಗುವ ಅಪಾಯ ಎದುರಾಗಿದೆ, ರಸ್ತೆ ಕುಸಿತದ ಹಿನ್ನೆಲೆಯಲ್ಲಿ ವಾಹನಗಳು ಓಡಾಡಲು ಕಷ್ಟವಾಗಲಿದೆ. ವ್ಯಾಪಾರ ವಹಿವಾಟು ನಿಲ್ಲುವ ಆತಂಕದಲ್ಲಿರುವ ಮಂಡಿಪೇಟೆ ವರ್ತಕರು ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ರಸ್ತೆ ನಿರ್ಮಾಣ ಎಂದು ತೊಂದರೆ ಕೊಟ್ಟಿದ್ದು, ಈಗ ಇದೇ ರಸ್ತೆ ಕುಸಿದಿದೆ ಎಂದರೇ ಏನರ್ಥ? ಕಳಪೆ ಕಾಮಗಾರಿಯಿಂದ ಹೊಸ ಸಮಸ್ಯೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿರುವುದಕ್ಕೆ ಮಂಡಿಪೇಟೆ ರಸ್ತೆ ಕುಸಿತವೇ ಸಾಕ್ಷಿಯಾಗಿದೆ, ರಸ್ತೆ ಮಾಡುವಾಗ ಕೆಳಗೆ ಪೈಪ್ ದುರ್ಬಲವಾಗಿದೆ ಎಂಬುದನ್ನೇ ನೋಡಿಲ್ಲ ಎಂದಾದರೆ ಹೇಗೆ?, ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚಮಾಡಿ ತುಮಕೂರಿನಲ್ಲಿ ಸಮಸ್ಯೆ ತಂದೊಡ್ಡಲಾಗಿದೆ. ಡಾ.ರಫೀಕ್ ಅಹ್ಮದ್ ಮಾಜಿ ಶಾಸಕ ಹಳೆಯ ಎಪಿಎಂಸಿ ಮಾರುಕಟ್ಟೆ ಇದ್ದ ಮಂಡಿಪೇಟೆ ಸರ್ಕಲ್‌ನಲ್ಲಿ ಭೂಕುಸಿತವಾಗಿದ್ದು, ವ್ಯಾಪಾರಸ್ಥರು ತಾಳ್ಮೆಯಿಂದ ಇರಬೇಕು. 26 ವರ್ಷದ ಯುಜಿಡಿ ಪೈಪ್ ಹೊಡೆದಿದ್ದು ಸ್ಮಾರ್ಟ್‌ಸಿಟಿ ಯೋಜನೆಯಿಂದ ಇತ್ತೀಚೆಗಷ್ಟೇ ನಿರ್ಮಿಸಿದ್ದ ರಸ್ತೆ ಕುಸಿತಕ್ಕೆ ಕಾರಣವಾಗಿದೆ. ಜಿ.ಬಿ.ಜ್ಯೋತಿಗಣೇಶ್ ಶಾಸಕ