ಮಂಟೇಸ್ವಾಮಿ ಪುಣ್ಯಕ್ಷೇತ್ರಗಳ ಪ್ರಾಧಿಕಾರ ರಚನೆ ನಿರ್ಧಾರ ಸರಿಯಲ್ಲ:  ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸು ವಿರೋಧ

mysore
Published on

ಮೈಸೂರು: ತಳ ಸಮುದಾಯಗಳ ಶ್ರದ್ಧಾ, ಭಕ್ತಿ ಹಾಗೂ ಸಾಮಾಜಿಕ ಕ್ರಾಂತಿಯ ಕೇಂದ್ರಗಳಾಗಿರುವ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪುಣ್ಯಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಹೊರಟಿರುವುದು ನ್ಯಾಯಸಮ್ಮತವಲ್ಲದ ನಿರ್ಧಾರ. ರಾಜ್ಯ ಸರ್ಕಾರ ಇದನ್ನು ಕೈಬಿಡಬೇಕು ಎಂದು ಲೇಖಕ ಹಾಗೂ ಚಿಂತನಾ ಬಳಗದ ಮುಖ್ಯಸ್ಥ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸು ಒತ್ತಾಯಿಸಿದ್ದಾರೆ.

ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ನೆಲೆಯಾಗಿರುವ ಈ ಪುಣ್ಯಕ್ಷೇತ್ರಗಳು ಹಾಗೂ ಇದಕ್ಕೆ ಹೊಂದಿಕೊಂಡಿರುವ ಚಿಕ್ಕಲ್ಲೂರು, ಕಪ್ಪಡಿ, ಬಿ.ಜಿ.ಪುರ, ಕುರುಬನಕಟ್ಟೆ ಹಾಗೂ ಆದಿಹೊನ್ನನಾಯಕನಹಳ್ಳಿ ಕ್ಷೇತ್ರಗಳಿಗೆ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರ ಏ.24ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದು ಸರಿಯಲ್ಲ.

ಈ ಪುಣ್ಯಕ್ಷೇತ್ರಗಳ ಆಚರಣೆ, ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರಗಳು ಇತಿಹಾಸ ಹಾಗೂ ಸಮುದಾಯದ ನಂಬಿಕೆಗಳಾಗಿವೆ. ಪ್ರಮುಖವಾಗಿ ನೀಲಗಾರರ ನಂಬಿಕೆಗಳ ಮೇಲೆ ತಲತಲಾಂತರಗಳಿಂದ ನಡೆದುಕೊಂಡುಬಂದಿವೆ. ಈ ಕ್ಷೇತ್ರಗಳ ಪಾವಿತ್ರತೆಯನ್ನು ಎರಡು ಅನುವಂಶಿಕ ಕುಟುಂಬಗಳು ಅತೀವ ಶ್ರದ್ಧೆ, ಭಕ್ತಿ, ನಂಬಿಕೆಗಳಿಂದ ರಕ್ಷಿಸುತ್ತಾ ಪೋಷಿಸಿಕೊಂಡು ಬಂದಿವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮಳವಳ್ಳಿ ಮಂಟೇಸ್ವಾಮಿ ಮಠವು ಇಂತಹ ಯಾವುದೇ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಬೆಂಬಲಿಸುವುದಿಲ್ಲ ಹಾಗೂ ಸಚಿವ ಸಂಪುಟ ಸಭೆಯ ಈ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು. ಈ ನಿರ್ಧಾರವನ್ನು ಶತಮಾನಗಳಿಂದ ನಡೆದುಕೊಂಡು ಬಂದಿರುವಂತಹ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಂಪರೆಯ ಮೇಲಿನ ದಾಳಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಅಭಿವೃದ್ಧಿ ಪ್ರಾಧಿಕಾರ ರಚನೆಯ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಬೇಕು. ಎಲ್ಲ ನೀಲಗಾರರು, ಭಕ್ತರು ಹಾಗೂ ನಾಗರಿಕರು ಸಂಘಟಿತರಾಗಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net