

ಚಾಮರಾಜನಗರ: ನಗರದ ಉಪ್ಪಾರ ಬಡಾವಣೆಯಲ್ಲಿರುವ ಮಂಟೇಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಮುಂಜಾನೆ ಹುಂಡಿ ಕಳ್ಳತನವಾಗಿದೆ.
ದೇಗುಲದ ಬಾಗಿಲ ಬೀಗ ಮುರಿದಿರುವ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ಚಿಲ್ಲರೆ ಹಣವನ್ನು ಸ್ಥಳದಲ್ಲೇ ಸುರಿದಿದ್ದಾರೆ. ನೋಟುಗಳನ್ನು ತುಂಬಿಕೊಂಡು ಹುಂಡಿಯನ್ನು ಹೊತ್ತೊಯ್ದು ಪರಾರಿಯಾಗಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಬಡಾವಣೆಯ ಭಕ್ತರು ಜಮಾಯಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮುಖಂಡ ಮಸಣಶೆಟ್ಟಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುಮಾರು 30 ಸಾವಿರ ರೂ. ಕಾಣಿಕೆ ಹಣ ಕಳ್ಳತನವಾಗಿದೆ ಎಂದು ಅಂದಾಜಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.