ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಮಾಡಿದ್ದ ಶ್ವಾನ ‘ಲೀನಾ’ ಇನ್ನು ನೆನಪು

dog
Published on

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಶ್ವಾನದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಂಬ್ ಪತ್ತೆ ಕಾರ್ಯದಲ್ಲಿ ನಿಷ್ಣಾತೆ ಎನಿಸಿದ ಲಾಬ್ರಡೋರ್ ಜಾತಿಗೆ ಸೇರಿದ ಶ್ವಾನ ಲೀನಾ(8 ವರ್ಷ 9 ತಿಂಗಳು) ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ.

ಕಳೆದ ಫೆಬ್ರವರಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲೀನಾ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಮೃತಪಟ್ಟಿತು. 2020 ಜ.12ರಂದು ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಇರಿಸಿದ್ದ ಬಾಂಬ್ ಅನ್ನು ಪತ್ತೆ ಮಾಡಿದ ಹೆಗ್ಗಳಿಕೆ ಲೀನಾ ಹೊಂದಿದೆ. ವಿಮಾನ ನಿಲ್ದಾಣದಲ್ಲಿ ಪ್ರತಿ ಗಂಟೆಗೊಮ್ಮೆ ಶ್ವಾನದಳದಿಂದ ಸ್ಫೋಟಕ ಪತ್ತೆ ತಪಾಸಣೆ ನಡೆಯುತ್ತಿರುತ್ತದೆ. ಅದೇ ರೀತಿ ಅಂದು ಲೀನಾ ವಿಮಾನ ನಿಲ್ದಾಣ ಪ್ರಾಂಗಣದಲ್ಲಿ ತಪಾಸಣೆಯಲ್ಲಿ ನಿರತವಾಗಿತ್ತು. ಅಷ್ಟರಲ್ಲಿ ಬಾಕ್ಸ್‌ವೊಂದರಲ್ಲಿ ಸ್ಫೋಟಕ ಇರುವುದನ್ನು ಲೀನಾ ಪತ್ತೆ ಮಾಡಿತ್ತು. ಲೀನಾಳನ್ನು ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

2013 ಮೇ 5ರಂದು ಜನಿಸಿದ ಲೀನಾ ರಾಂಚಿಯಲ್ಲಿ ಸ್ಫೋಟಕ ಪತ್ತೆ ಕಾರ್ಯಾಚರಣೆಯ ತರಬೇತಿ ಪಡೆದು ಮಂಗಳೂರು ವಿಮಾನ ನಿಲ್ದಾಣ ಶ್ವಾನದಳಕ್ಕೆ ಸೇರ್ಪಡೆಯಾಗಿತ್ತು. ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಶ್ವಾನದಳ ವಿಭಾಗದ ನಾಲ್ಕು ಶ್ವಾನಗಳಲ್ಲಿ ಲೀನಾ ಅತ್ಯಂತ ಚುರುಕಿನಿಂದ ಕೂಡಿತ್ತು. ದಾಖಲೆಗಳಲ್ಲಿ ಲೀನಾ ಎಂಬ ಹೆಸರಿದ್ದರೂ ಸಿಐಎಸ್‌ಎಫ್ ಸಿಬ್ಬಂದಿ ಇದನ್ನು ‘ಡಾಲಿ’ ಎಂದೇ ಕರೆಯುತ್ತಿದ್ದರು. ಲೀನಾಳ ಜಾಗಕ್ಕೆ ಮತ್ತೊಂದು ಶ್ವಾನವನ್ನು ನಿಯುಕ್ತಗೊಳಿಸಲಾಗುತ್ತಿದ್ದು, ಅದು ಪ್ರಸ್ತುತ ರಾಂಚಿಯಲ್ಲಿ ತರಬೇತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net