ಮಂಗಳೂರು ನಗರದ ಓಣಿಗಳಲ್ಲಿ ಓಡಲಿದೆ ಸೈಕಲ್

cycle new
Published on

ಮಂಗಳೂರು: ಪ್ರಮುಖ ರಸ್ತೆಗಳಲ್ಲಿನ ವಾಹನದ ಭರಾಟೆಯಲ್ಲಿ ಸೈಕಲ್ ಬಳಸುವವರು, ಮುಖ್ಯವಾಗಿ ವಿದ್ಯಾರ್ಥಿಗಳು ಬಳಲಿ ಬೆಂಡಾಗುತ್ತಾರೆ, ವಾಹನ ಚಾಲಕರ ವೇಗದ ಚಾಲನೆಯಿಂದ ಸೈಕಲ್ ಬಳಕೆ ಸುರಕ್ಷಿತವಲ್ಲ ಎಂದು ಹೆತ್ತವರೂ ಮಕ್ಕಳನ್ನು ಸೈಕಲ್ ಬಳಕೆ ಮಾಡುವುದಕ್ಕೆ ಬಿಡುವುದಿಲ್ಲ.

ಆದರೆ ನಗರದೊಳಗೆ ಅಲ್ಲಲ್ಲಿ ಇರುವ ಓಣಿಗಳನ್ನೇ ಸೈಕಲ್ ಪಥಗಳಾಗಿ ಮಾಡಿದರೆ ಹೇಗೆ? ಈ ಪರಿಕಲ್ಪನೆಯಲ್ಲಿ ಮೂಡಿರುವುದೇ ಸೈಕಲ್ ಓಣಿ ಯೋಜನೆ. ಮಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಸ್ಪರ್ಶಿಸುವಂತಹ ಸೈಕಲ್ ಓಣಿಯನ್ನು ಈಗಾಗಲೇ ಬಹುತೇಕ ರೂಪಿಸಿದ್ದಾಗಿದೆ.

ನಮ್ಮಲ್ಲಿರುವ ಹಳೆಯ, ಜನರು ಕಾಲ್ನಡಿಗೆಗೆ ಬಳಸುವಂತಹ ಸುವ್ಯವಸ್ಥಿತ ಓಣಿಗಳು ಅದೃಷ್ಟವಷಾತ್ ಇನ್ನೂ ಹಾಗೆಯೇ ಉಳಿದುಕೊಂಡಿವೆ, ಇಲ್ಲಿ ಹೆಚ್ಚು ವಾಹನಗಳ ಭರಾಟೆಯಿಲ್ಲ, ಅವುಗಳನ್ನು ಬಳಸಿದರೆ ಸುರಕ್ಷಿತವಾಗಿ ಸೈಕಲ್‌ನಲ್ಲಿ ತೆರಳುವುದು ಸಾಧ್ಯ ಎನ್ನುತ್ತಾರೆ ಸೈಕಲ್ ಓಣಿಗಳ ಬಗ್ಗೆ ಅಧ್ಯಯನ ನಡೆಸಿ, ಯೋಜನೆ ರೂಪಿಸಿರುವ ಸಲಹೆಗಾರ ನಿರೇನ್ ಜೈನ್. ಈಗಾಗಲೇ ಬೋಳಾರದಲ್ಲಿ ನೇತ್ರಾವತಿ ನದಿ ಬದಿಯಿಂದ ಮಂಗಳೂರಿನ ಶ್ರೀದೇವಿ ಕಾಲೇಜುವರೆಗೂ ಸೈಕಲ್ ಓಣಿಯ ನಕ್ಷೆ ಸಿದ್ಧಪಡಿಸಿದ್ದಾಗಿದೆ. ಈ ಪಥದಲ್ಲಿ ಸಾಗಿದರೆ ಮಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಸುಲಭ.

ಸೈಕಲ್ ಲೇನ್‌ಗಳನ್ನು ವಿದ್ಯಾರ್ಥಿಗಳೂ ಸೇರಿದಂತೆ ನಾಗರಿಕರು ಬಳಸಬಹುದಾಗಿದೆ, ಈ ಮೂಲಕ ನಗರದ ವಾಹನ ದಟ್ಟಣೆ ಕಡಿಮೆಗೊಳಿಸುವುದು, ಪರಿಸರ ಮಾಲಿನ್ಯ ಮುಕ್ತಗೊಳಿಸುವುದು ಗುರಿ. ವಿದ್ಯಾರ್ಥಿಗಳು ತಮ್ಮ ಸೈಕಲ್‌ಗಳಲ್ಲಿ ಶಾಲೆಗಳಿಗೆ ತೆರಳುವುದಕ್ಕೆ ಅವಕಾಶ ಸಿಗಲಿದೆ.

ಪ್ರತ್ಯೇಕ ಸೈಕ್ಲಿಂಗ್ ಲೇನ್: ಈಗಿರುವ ಸೈಕಲ್ ಪಥದಲ್ಲಿ ಮಂಗಳೂರು ವಿವಿ ಕಾಲೇಜಿನಿಂದ ಹೈಲ್ಯಾಂಡ್ ಆಸ್ಪತ್ರೆ, ಕಂಕನಾಡಿ ಫಾದರ್ ಮುಲ್ಲರ್ಸ್‌ ಹಾಗೂ ಅಲ್ಲಿಂದ ಕಾಸಿಯಾ ಶಾಲೆವರೆಗಿನ ಮಾರ್ಗದ ಒಂದು ಬದಿಯಲ್ಲಿ ಪ್ರತ್ಯೇಕ ಸೈಕಲ್ ಲೇನ್ ಸಿದ್ಧಪಡಿಸುವುದಕ್ಕೂ ಮಂಗಳೂರು ಮಹಾನಗರಪಾಲಿಕೆ ಸಿದ್ಧತೆಯಲ್ಲಿದೆ.

ಬಹುತೇಕ ವಿದ್ಯಾರ್ಥಿಗಳು ಈ ರೀತಿಯ ಸೈಕಲ್ ಪಥದ ಬಳಕೆ ಮಾಡಬಹುದು, ಯಾಕೆಂದರೆ ಅದರಿಂದ ಹೆಚ್ಚಿನ ಸುರಕ್ಷತೆ ಸಿಗಲಿದೆ ಎನ್ನುವುದು ಅಧಿಕಾರಿಗಳ ಯೋಚನೆ.

ಓಣಿ ವಿಭಿನ್ನ ಪರಿಕಲ್ಪನೆ: ಸೈಕ್ಲಿಂಗ್ ವಿಚಾರದಲ್ಲಿ ಓಣಿ ಕಲ್ಪನೆಯನ್ನು ನಿರೇನ್ ಜೈನ್ ಪ್ರಸ್ತುತ ಪಡಿಸಿದಾಗ ಅದು ರಾಷ್ಟ್ರದಲ್ಲೇ ವಿಭಿನ್ನವಾಗಿರುವುದನ್ನು ರಾಜ್ಯದ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತೆ ಮಂಜುಳಾ ಗುರುತಿಸಿ, ತ್ವರಿತ ಗತಿಯಲ್ಲಿ ಈ ಪೈಲಟ್ ಯೋಜನೆ ಪೂರ್ಣವಾಗಬೇಕೆಂದು ಕ್ಷಿಪ್ರ ಅನುಮೋದನೆ ನೀಡಿದ್ದಾರೆ.

ಈ ರೀತಿಯ ಹಳೇ ಓಣಿಗಳನ್ನು ಸೈಕ್ಲಿಂಗ್ ಪಥವನ್ನಾಗಿಸಿದ ಉದಾಹರಣೆ ಎಲ್ಲೂ ಇಲ್ಲ, ಮುಖ್ಯರಸ್ತೆಗಳ ಗದ್ದಲದಿಂದ ಮುಕ್ತವಾಗಿ ಸಂಚರಿಸುವುದು ಸಾಧ್ಯ ಎನ್ನುವ ಜೊತೆಗೆ ಇವು ಸುರಕ್ಷಿತ. ಈ ಯೋಜನೆಗೆ ಈಗ ಪ್ರಾರಂಭಿಕ ವೇಗ ಸಿಗುತ್ತಿದ್ದು, ಮುಂದೆ ಇದನ್ನು ಪೊಲೀಸ್, ನಾಗರಿಕರ ಸಹಕಾರದೊಂದಿಗೆ ಇನ್ನಷ್ಟು ಉತ್ತಮ ಪಡಿಸಬಹುದು ಎನ್ನುತ್ತಾರೆ ನಿರೇನ್ ಜೈನ್.

10 ಕಿ.ಮೀ ವ್ಯಾಪ್ತಿಯೊಳಗೇ ಈ ಪಥ ಸಂಚರಿಸುವುದು, ಸೈಕ್ಲಿಂಗ್ ಮಾಡುತ್ತಾ ಕೆಲಸಕ್ಕೆ ತೆರಳುವವರಿಗೆ ಹೇಳಿ ಮಾಡಿಸಿದ್ದು, ನಾನು ಈ ಅಧ್ಯಯನಕ್ಕಾಗಿಯೇ ಓಣಿಗಳಲ್ಲೇ ಸೈಕಲ್ ಮೂಲಕ ಸಂಚರಿಸಿ ಅದರಲ್ಲಿರುವ ಖುಷಿ, ಜೊತೆಗೆ ಇರುವ ಕೆಲವು ತೊಂದರೆ ಎರಡನ್ನೂ ಮನಗಂಡಿದ್ದೇನೆ, ಸಮಸ್ಯೆಗಳನ್ನು ಸುಲಭವಾಗಿ ಇತ್ಯರ್ಥಗೊಳಿಸುವುದು ಸಾಧ್ಯ ಎನ್ನುತ್ತಾರೆ.

ಓಣಿಗೂ ಕಲರ್ ಕೋಡಿಂಗ್

ಓಣಿಗಳು ಇನ್ನಷ್ಟು ಇವೆ, ಅವುಗಳನ್ನು ಇನ್ನೂ ಮ್ಯಾಪ್ ಮಾಡುವುದು ಬಾಕಿ ಇದೆ. ಮುಂದಿನ ಹಂತದಲ್ಲಿ ಅವುಗಳೆಲ್ಲವನ್ನೂ ಬೆಸೆಯುವುದು, ಅದಕ್ಕೆ ಬೆಂಗಳೂರು ಮೆಟ್ರೋ ಮಾದರಿಯಲ್ಲಿ ಕಲರ್ ಕೋಡಿಂಗ್ ಮಾಡುವುದು, ಎಂದರೆ ಎಲ್ಲೆಲ್ಲಿ ಹೋಗಬಹುದು ಎನ್ನುವುದರ ಮಾರ್ಕಿಂಗ್ ಮಾಡುವುದು ಇತ್ಯಾದಿಗಳೆಲ್ಲವನ್ನೂ ಮಾಡುವುದಕ್ಕೆ ಅವಕಾಶವಿದೆ.

ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಇಂಡಿಯಾ ಸೈಕಲ್ಸ್4ಚೇಂಜ್ ಅಭಿಯಾನದಲ್ಲಿ ನಾಗರಿಕರಿಂದ ಸೈಕಲ್ ಬಳಕೆ ಕುರಿತಂತೆ ಇನ್ನಷ್ಟು ಸ್ಪಂದನೆಯ ಅಗತ್ಯವಿದೆ, ಹೆಚ್ಚು ಸ್ಪಂದನೆ ಬಂದರೆ ಸೈಕಲ್ ಪಥಕ್ಕೆ ಬೇಕಾದ ಅನುದಾನ ಲಭ್ಯವಾಗಲಿದೆ. ಈ ಕುರಿತು ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಕ್ಕೆ ಇಲ್ಲಿ ನೀಡಲಾದ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಸರ್ವೇಯಲ್ಲಿ ಭಾಗವಹಿಸಬಹುದು. ಅಥವಾ ಮನಪಾ ವೆಬ್‌ಸೈಟ್ http://www.mangalurucity.mrc.gov.in/en ಅಥವಾ ಸ್ಮಾರ್ಟ್‌ಸಿಟಿ ವೆಬ್‌ಸೈಟ್ https://www.mangalurusmartcity.net/ ಮೂಲಕ ಸಮೀಕ್ಷೆಯ ಲಿಂಕ್ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net