ಮಂಗಳೂರು: ಕೃಷಿ ಮಸೂದೆ ಜಾರಿಗೆ ವಿರೋಧಿಸಿ ಕರೆ ನೀಡಲಾಗಿರುವ ಭಾರತ್ ಬಂದ್‌ಗೆ ದ.ಕ. ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ವಿವಿಧೆಡೆ ರಸ್ತೆ ತಡೆ, ಪ್ರತಿಭಟನೆಗಳು ಮಾತ್ರ ನಡೆಯಿತು. ಉಳಿದಂತೆ ಜಿಲ್ಲಾದ್ಯಂತ ದೈನಂದಿನ ಜನ ಜೀವನ ಯಥಾಸ್ಥಿತಿಯಲ್ಲಿತ್ತು. ಜಿಲ್ಲಾ ಕೇಂದ್ರ ಮಂಗಳೂರಿನ ನಂತೂರು ಜಂಕ್ಷನ್‌ನಲ್ಲಿ ರೈತ, ಕಾರ್ಮಿಕ, ದಲಿತ ಸಂಘಟನೆಗಳು ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ, ಎಸ್‌ಡಿಪಿಐ ಮೊದಲಾದ ಪಕ್ಷಗಳ ಮುಖಂಡರು, ಕಾರ್ಯಕತರು ಕೆಲ ಹೊತ್ತು ಹೆದ್ದಾರಿ ತಡೆದು ಪ್ರತಿಭಟಿಸಿದರು.
ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಹಸಿರು ಸೇನೆ, ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಫರ್ನಾಂಡಿಸ್, ಪ್ರಾಂತ ರೈತ ಸಂಘದ ಅಧ್ಯಕ್ಷ ಕೆ.ಯಾದವ ಶೆಟ್ಟಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಹನ್ ಗೌಡ, ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಸಿಐಟಿಯು ಜಿಲ್ಲಾಧ್ಯಕ್ಷ ಭಾಲಕೃಷ್ಣ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ಜೆಡಿಎಸ್ ಮುಖಂಡ ಎಂಬಿ ಸದಾಶಿವ ಮೊದಲಾದವರು ಭಾಗವಹಿಸಿದ್ದರು.
ವಾಹನ ಸಂಚಾರ ಪಥ ಬದಲಾವಣೆ: ಪ್ರತಿಭಟನೆ ಹಿನ್ನೆಯಲ್ಲಿ ಪೊಲೀಸರು ಮೊದಲೇ ಹೆದ್ದಾರಿಯಲ್ಲಿ ವಾಹನ ಸಂಚಾರ ಪಥವನ್ನು ಬದಲಾಯಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗಿಲ್ಲ. ನಂತೂರಿಗೆ ಬರುವ ವಾಹನಗಳನ್ನು ಕೆಪಿಟಿ, ಪಡೀಲ್, ಪಂಪ್‌ವೆಲ್‌ನಲ್ಲಿ ತಡೆದು ಬೇರೆ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು.