ಮಂಗಳಾ ಆಸ್ಪತ್ರೆಯಲ್ಲಿ ಹೃದಯ ಕವಾಟ ಜೋಡಣೆ ಚಿಕಿತ್ಸೆ ಯಶಸ್ವಿ

ಮಂಗಳಾ ಆಸ್ಪತ್ರೆಯಲ್ಲಿ ಹೃದಯ ಕವಾಟ ಜೋಡಣೆ ಚಿಕಿತ್ಸೆ ಯಶಸ್ವಿ
Published on

ಹಾಸನ : ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೃದಯ ಕವಾಟ ಜೋಡಣೆ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ವೈದ್ಯಲೋಕದಲ್ಲೇ ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಮಂಗಳಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎಂ.ಪಿ. ಅಶೋಕ್ ಗೌಡ ತಿಳಿಸಿದರು.

ಹಾಸನದಲ್ಲಿ ಮೊಟ್ಟ ಮೊದಲ ಬಾರಿಗೆ ವೈದ್ಯ ಲೋಕದ ಆವಿಷ್ಕಾರಗಳಲ್ಲಿ ಒಂದಾದ ಹೃದಯದ ಕವಾಟ ಜೋಡಣೆ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಹೃದಯ ಕವಾಟ ಜೋಡಣೆ ಮಾಡಬೇಕಾದರೆ ಮೊದಲು ಆಪರೇಷನ್ ಮಾಡಬೇಕಾಗಿತ್ತು. ಆದರೆ ಈಗ ಆಪರೇಷನ್ ಇಲ್ಲದೇ ಹೃದಯ ಚಿಕಿತ್ಸೆ ಮಾಡಲಾಗಿದೆ. ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಡಾ. ಆಶಿತ್ ಶ್ರೀಧರ್ ಹಾಗೂ ಅರವಳಿಕೆ ತಜ್ಞರಾದ ಡಾ.ಸೀಮಾ ಭಟ್ ಹಾಗೂ ಸಿಬ್ಬಂದಿ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಡಾ. ಆಶಿತ್ ಶ್ರೀಧರ್, ಹಾಸನ ಮೂಲದ 78 ವರ್ಷದ ವೃದ್ಧರಿಗೆ ಹಲವು ದಿನದಿಂದ ಹೃದಯದ ರಕ್ತದ ಚಲನೆ ತೀವ್ರ ಕಡಿಮೆಯಾಗಿತ್ತು. ದಣಿವು ಉಸಿರಾಟದಿಂದ ಎದೆ ನೋವು, ತಲೆ ಸುತ್ತು ಕಾಣಿಸಿಕೊಳ್ಳುತ್ತಿತ್ತು. ನಂತರ ಹೃದಯಾಘಾತಕ್ಕೆ ಒಳಗಾದರು. ಇದರಿಂದ ಅವರ ಕವಾಟದಲ್ಲಿ ಕ್ಯಾಲ್ಸಿಯಂ ಅಂಶ ಸೇರಿಕೊಂಡು ಕವಾಟ ಬಹಳ ಚಿಕ್ಕದಾಗಿ ಮುಂದಿನ ಎರಡು ವರ್ಷ ಅವಧಿ ಕೂಡ ಜೀವಿಸಲು ಕಷ್ಟವಾಗಿತ್ತು. ನಂತರ ನಮ್ಮ ಆಸ್ಪತ್ರೆಗೆ ದಾಖಲಾದಾಗ ಒಂದು ತಿಂಗಳ ಸತತ ಹಾಗೂ ತೀವ್ರ ವೈದ್ಯಕೀಯ ಪರಿಶೀಲನೆ ಒಳಪಡಿಸಿ ನೂತನ ಬಗೆಯ ಚಿಕಿತ್ಸೆ ಬಗ್ಗೆ ತಿಳಿಸಿದಾಗ ಅವರ ಒಪ್ಪಿಗೆ ಪಡೆದು ಯಶಸ್ವಿಯಾಗಿ ಈ ವಿಧಾನದ ಚಿಕಿತ್ಸೆ ಪೂರ್ಣಗೊಳಿಸಲಾಯಿತು ಎಂದರು.

ಟಿಎವಿಐ ವಿಧಾನದಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಆಗುವಂತೆ ತೆರೆದ ಗಾಯಗಳಾಗಲಿ, ಹೊಲಿಗೆ ಇರುವುದಿಲ್ಲ. ಸ್ಥಳೀಯ ಅರವಳಿಕೆ ಕೊಟ್ಟು ಕಾಲಿನ ರಕ್ತನಾಳದಿಂದ ಹೊಸ ಕವಾಟವನ್ನು ಅಳವಡಿಸಲಾಗುತ್ತದೆ. ಈ ವಿಧಾನದಲ್ಲಿ ರೋಗಿ ಕೇವಲ ಮೂರು ಗಂಟೆಗಳ ನಂತರ ತಮ್ಮ ಚಟುವಟಿಕೆ ಆರಂಭಿಸಬಹುದು ಹಾಗೂ 48 ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಬಹುದಾಗಿದೆ. ಇದೀಗ ಚಿಕಿತ್ಸೆ ಪಡೆದವರು ಎರಡು ದಿನಗಳಲ್ಲಿ ಮನೆಗೆ ತೆರಳಿ ತಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲೇ ಇಂತಹ ಚಿಕಿತ್ಸೆ ನಡೆದಿರುವುದು ಕೇವಲ ಮೂರು ಕಡೆ ಮಾತ್ರ. ಇದೀಗ ನಮ್ಮ ಆಸ್ಪತ್ರೆಯಲ್ಲಿ ನಾಲ್ಕನೆ ಯಶಸ್ವಿ ಚಿಕಿತ್ಸೆ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net