

ಚಿತ್ರದುರ್ಗ: ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಜೂ. 4ರ ಮಂಗಳವಾರ ನಡೆಯಲಿದ್ದು, ಯಾರಿಗೆ ಮಂಗಳಕರ ಎಂಬ ಕುರಿತು ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರಾದ್ಯಂತ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯಲಾರಂಭಿಸಿದೆ.
ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಗೆಲುವಿನ ನಿರೀಕ್ಷೆ ಹೊತ್ತ ಅಭ್ಯರ್ಥಿಗಳಲ್ಲೂ ಕೊಂಚ ಆತಂಕ ಮನೆ ಮಾಡಿದೆ. ಫಲಿತಾಂಶ ಹೊರಬಿದ್ದ ನಂತರವೇ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಡಿಸಿಎಂ ಗೋವಿಂದ ಎಂ ಕಾರಜೋಳ ಹಾಗೂ ಮಾಜಿ ಸಂಸದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ನಡುವೆ ನೇರ ಹಣಾಹಣಿ ನಡೆದಿದ್ದು, ಗೆಲುವಿನ ಲೆಕ್ಕಾಚಾರದಲ್ಲಿ ಬೆಂಬಲಿಗರೂ ಮುಳುಗಿದ್ದಾರೆ.
ಚುನಾವಣೆಯಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದು, ಎನ್‌ಡಿಎ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಕಾರಣವಾಯಿತು. ಏಕೆಂದರೆ, ಈ ಬಾರಿಯ ಲೋಕಸಭಾ ಚುನಾವಣೆಯ ಪ್ರತಿ ಸೀಟು ಗೆಲ್ಲುವುದು ಭವಿಷ್ಯದ ರಾಜಕೀಯ ಹಾಗೂ ಬೆಳವಣಿಗೆ ದೃಷ್ಟಿಯಿಂದ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಮೈತ್ರಿ, ಕೈ ಪಕ್ಷದ ಪ್ರಮುಖ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೊನೆ ಹಂತದವರೆಗೂ ಹೋರಾಟ ನಡೆಸಿದ್ದು, ಕಂಡುಬಂದಿತ್ತು.
ದೇಶದೊಳಗೆ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆಗೆ ಶನಿವಾರ ತೆರೆಬಿದ್ದ ನಂತರ 2024ರ ಮತದಾನೋತ್ತರ ಸಮೀಕ್ಷೆಗಳ ಹೇಳಿಕೆ ಪ್ರಕಾರ ಕರ್ನಾಟಕದಲ್ಲೂ ಬಿಜೆಪಿಗೆ ಆಶಾದಾಯಕವಾಗಿದ್ದು, ಒಂದೆಡೆ ಗೋವಿಂದ ಕಾರಜೋಳ ಅವರು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಗ್ಯಾರಂಟಿ ಎನ್ನುತ್ತಿರುವ ಕೈ ನಾಯಕರ ನಂಬಿಕೆಯಿಂದಾಗಿ ಮತ್ತೊಂದೆಡೆ ಚಂದ್ರಪ್ಪ ಅವರೂ ಗೆಲುವು ಸಾಧಿಸುವ ಅಚಲ ವಿಶ್ವಾಸ ಹೊಂದಿದ್ದಾರೆ. ಆದರೆ, ವಿಜಯ ಪತಾಕೆ ಬಾರಿಸುವವರ‌್ಯಾರು ಎಂಬುದು ಫಲಿತಾಂಶ ಪ್ರಕಟ ಆಗುವವರೆಗೂ ಕಾಯಬೇಕಿದೆ.
ಚಿತ್ರದುರ್ಗ-6, ತುಮಕೂರು-2 ಸೇರಿ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರು, ಗ್ಯಾರಂಟಿ ಯೋಜನೆಗಳು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿ ಪಕ್ಷದ ಘಟಾನುಘಟಿ ನಾಯಕರ ಪ್ರಚಾರದ ಭರಾಟೆ, ಸಂಘಟಿತ ಶ್ರಮ ಚಂದ್ರಪ್ಪರ ಕೈ ಹಿಡಿಯುವ ನಂಬಿಕೆ ಕೈ ಪಾಳಯದಲ್ಲಿದೆ.
ಅದೇ ರೀತಿ ಕಣಕ್ಕೆ ರಾಜ್ಯದಲ್ಲೇ ಕೊನೆಯಾದಾಗಿ ಈ ಕ್ಷೇತ್ರದ ಹುರಿಯಾಳು ಹೆಸರು ಪ್ರಕಟಿಸಿದ ಬಿಜೆಪಿ ತಂತ್ರಗಾರಿಕೆ, ಕಾರಜೋಳ ರಾಜಕೀಯ ಅನುಭವ, ಬಿಜೆಪಿ ರಾಜ್ಯಾಧ್ಯಕ್ಷರು ಒಳಗೊಂಡು ಬಿಜೆಪಿ-ಜೆಡಿಎಸ್ ನಾಯಕರಿಂದ ಮತಯಾಚನೆ, ನೀರಾವರಿ ಯೋಜನೆಗಳ ಪ್ರಸ್ತಾಪ, ಪ್ರಧಾನಿ ನರೇಂದ್ರ ಮೋದಿ ಅಲೆ ಅಭ್ಯರ್ಥಿಗೆ ವರದಾನವಾಗಲಿದೆ ಎಂಬ ನಂಬಿಕೆ ಮೈತ್ರಿ ಪಕ್ಷಗಳ ಮುಖಂಡರಲ್ಲಿದೆ. ಎಲ್ಲದಕ್ಕೂ ಫಲಿತಾಂಶವೇ ಉತ್ತರ ಹೇಳಿಲಿದೆ.
ಮತದಾನ ದಿನದಂದು ವಿವಿ ಪ್ಯಾಟ್‌ಗಳನ್ನು ಇಡಲು ಮತ್ತು ಅಂಚೆ ಮತ ಎಣಿಕೆಗೆ ತಲಾ ಒಂದೊಂದು ಪ್ರತ್ಯೇಕ ಟೇಬಲ್‌ಗಳು ಇರಲಿವೆ. ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳಿಂದ ತರುವ ಇವಿಎಂಗಳನ್ನು ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಪ್ರತಿ ಟೇಬಲ್‌ನ ಎಣಿಕೆ ಅಧೀಕ್ಷಕರ ಸಹಿತ ಮೂವರು ಅಧಿಕಾರಿಗಳು ಪರಿಶೀಲಿಸಿದ ನಂತರ ಎಣಿಕೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ, ಪಾವಗಡ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಶಿರಾ, ಹಿರಿಯೂರು, ಎರಡನೇ ಮಹಡಿಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಈ ಕ್ಷಣಕ್ಕಾಗಿ ಏಜೆಂಟರು ಕುತೂಹಲದಿಂದ ಕಾಯುತ್ತಿದ್ದಾರೆ.
ಆಸಕ್ತಿ ಕೆರಳಿಸಿದೆ: 2019ರ ಚುನಾವಣೆಗಿಂತಲೂ ಈ ಬಾರಿ ಮತದಾನ ಪ್ರಮಾಣ ಕ್ಷೇತ್ರದಲ್ಲಿ ಶೇ 3ರಷ್ಟು ಹೆಚ್ಚಾಗಿದ್ದು, ಶೇ 73.3 ಮತದಾನ ದಾಖಲಾಗಿತ್ತು. ಚಿತ್ರದುರ್ಗ-70.69, ಚಳ್ಳಕೆರೆ-72.72, ಹಿರಿಯೂರು-71.53, ಹೊಳಲ್ಕೆರೆ-75.45, ಹೊಸದುರ್ಗ-74, ಮೊಳಕಾಲ್ಮುರು-75.75, ಪಾವಗಡ-70.52, ಶಿರಾ-75.70 ಸೇರಿ ಒಟ್ಟು 73.3 ಮತದಾನ ನಡೆದಿತ್ತು. ಇದು ಕೂಡ ಯಾರ ಗೆಲುವಿಗೆ ಕಾರಣವಾಗಲಿದೆ ಎಂಬುದರ ಕುರಿತು ಮತದಾರರಲ್ಲಿ ಆಸಕ್ತಿ ಕೆರಳಿಸಿದೆ.