ಮಂಗಲದಲ್ಲಿ ಕೋಣನ ಮಾರಮ್ಮನ ಜಾತ್ರೆ

07 HANUR 1.
Published on

ಹನೂರು: ಹೊಸ ಸೀರೆಯುಟ್ಟ ಮಹಿಳೆಯರು, ಯುವತಿಯರ ಕಲರವ. ಮೆರವಣಿಗೆಯುದ್ದಕ್ಕೂ ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದ ಯುವ ಸಮೂಹ, ಮೆರಗು ತಂದ ಉಗ್ರ ನರಸಿಂಹ, ಮಹಿಷಿ ವೇಷಧಾರಿ ಹಾಗೂ ಗಾರುಡಿಗ ಗೊಂಬೆಗಳ ಕುಣಿತ. ಗ್ರಾಮಸ್ಥರಲ್ಲಿ ಮನೆ ಮಾಡಿದ ಸಂಭ್ರಮ…


ಇದು ಹನೂರು ತಾಲೂಕು ಮಂಗಲ ಗ್ರಾಮದಲ್ಲಿ 25 ವರ್ಷದ ಬಳಿಕ ನಡೆಯುತ್ತಿರುವ ಆದಿಶಕ್ತಿ ಶ್ರೀ ಕೋಣನ ಮಾರಮ್ಮನ ಜಾತ್ರೆಯಲ್ಲಿ (ದೊಡ್ಡಹಬ್ಬ) ಬುಧವಾರ ತಂಪುಜ್ಯೋತಿ ಅರ್ಪಣೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು. ಜಾತ್ರೋತ್ಸವವು 20 ದಿನಗಳ ಕಾಲ ನಡೆಯಲಿದ್ದು, ಸುತ್ತಲಿನ ಮಂಗಲ, ಮೋಡಹಳ್ಳಿ, ಕಣ್ಣೂರು, ಆನಾಪುರ, ಹನೂರು, ಗುಂಡಾಪುರ ಹಾಗೂ ಕಾಮಗೆರೆ ಗ್ರಾಮದ ಜನರು ಆಚರಿಸುತ್ತಿದ್ದಾರೆ. ಬುಧವಾರ ತಂಪುಜ್ಯೋತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಣನಮಾರಮ್ಮ ಹಾಗೂ ದೊಡ್ಡಮ್ಮತಾಯಿ ದೇಗುಲದ ಮುಂಭಾಗ ಚಪ್ಪರ ಹಾಕಿ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಬೆಳಗ್ಗೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.


ತಂಪುಜ್ಯೋತಿ ಅರ್ಪಣೆ: ಎಲ್ಲ ಸಮುದಾಯದ ಜನರು ಸೇರಿ ಮಾಡುವ ಈ ದೊಡ್ಡಹಬ್ಬದಲ್ಲಿ ಬುಧವಾರ ಮಂಗಲ, ಗುಂಡಾಪುರ, ಕಣ್ಣೂರು ಸೇರಿದಂತೆ ಇನ್ನಿತರೆ ಗ್ರಾಮದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಹೊಸ ಹೊಸ ಸೀರೆಯುಟ್ಟು ಸತ್ತಿಗೆ ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮಸ್ಥರೊಡನೆ ಮೆರವಣಿಗೆ ಮೂಲಕ ಕೋಣನ ಮಾರಮ್ಮನ ದೇಗುಲಕ್ಕೆ ಆಗಮಿಸಿ ತಂಪುಜ್ಯೋತಿಯನ್ನು (ತಂಬಿಟ್ಟು) ಅರ್ಪಿಸಿದರು. ಗಮನ ಸೆಳೆದ ಮಹಿಷಿ, ಉಗ್ರ ನರಸಿಂಹ ಹಾಗೂ ಗಾರುಡಿಗ ಗೊಂಬೆಗಳ ಪ್ರದರ್ಶನ ಮೆರವಣಿಗೆಗೆ ಮೆರಗು ತಂದವು. ದಾರಿಯುದ್ದಕ್ಕೂ ಯುವಕರು ವಾದ್ಯಗಳ ತಾಳಕ್ಕೆ ಕುಣಿದು ಸಂಭ್ರಮಿಸಿದರು. ಸಾವಿರಾರು ಭಕ್ತರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net