

ಸಿದ್ದಾಪುರ: ಕೆಎಫ್ಡಿ (ಮಂಗನ ಕಾಯಿಲೆ) ಮುಂಜಾಗ್ರತೆ ಕುರಿತು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅಧ್ಯಕ್ಷತೆಯಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಯಿತು.
ಡಾ. ಹರೀಶಕುಮಾರ ಮಾತನಾಡಿ, ಇಟಗಿ, ಹೊನ್ನೆಘಟಗಿ, ಲಂಬಾಪುರ, ವಾಜಗೋಡ, ಮಳಗುಳಿ, ಬಾಳಗೋಡ ಮತ್ತಿತರ ಕಡೆಗಳಲ್ಲಿ ಮಂಗಗಳು ಸತ್ತಿರುವುದು ಕಂಡುಬಂದಿದೆ. ಶುಕ್ರವಾರ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಎಚ್ಚರಗೊಂಡು ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರ ವಹಿಸಬೇಕಾಗಿದೆ. ಯಾವುದೇ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಜ್ವರ, ಕೆಮ್ಮು ಮತ್ತಿತರ ಕಾಯಿಲೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದರೆ ಅದರ ಮಾಹಿತಿ ಪಡೆದುಕೊಂಡು ಅಂಥವರ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವರದಿ ಪಡೆದುಕೊಳ್ಳಬೇಕು. ತಾಲೂಕಿನಲ್ಲಿನ ಖಾಸಗಿ ವೈದ್ಯರ ಸಭೆ ನಡೆಸಿ ಅವರಲ್ಲಿ ಚಿಕಿತ್ಸೆ ಪಡೆದುಕೊಂಡ ವ್ಯಕ್ತಿಯ ಕುರಿತು ಮಾಹಿತಿ ನೀಡುವಂತೆ ಕೇಳಿಕೊಳ್ಳಬೇಕು ಎಂದು ತಾಲೂಕು ಆಡಳಿತ ವ್ಯೆದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಅವರಿಗೆ ಸೂಚಿಸಿದರು.
ಎಸಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಒಂದು ವಾರದೊಳಗೆ ಇಟಗಿ ಭಾಗದಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ, ವಿವಿಧ ಸಂಘಟನೆಗಳ, ಸಾರ್ವಜನಿಕರ ಸಭೆ ನಡೆಸಿ ಜನ ಲಸಿಕೆ ಪಡೆದುಕೊಳ್ಳುವಂತೆ ಹಾಗೂ ರೋಗದ ಕುರಿತು ಮಾಹಿತಿ ನೀಡಲಾಗುತ್ತದೆ. ಜನ ಸಂಕಷ್ಟದಲ್ಲಿರುವುದರಿಂದ ಯಾವುದೇ ಇಲಾಖೆ ಅಧಿಕಾರಿಗಳು ನಿಷ್ಕಾಳಜಿ ತೋರಬಾರದು ಎಂದು ಎಚ್ಚರಿಸಿದರು.
ಒಂದು ವಾರದೊಳಗೆ ನೇಮಕ
ತಾಲೂಕಿನ ಏಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ ಉಪಕೇಂದ್ರದಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಹಾಗೂ ಕಿರಿಯ ಪುರುಷ ಆರೋಗ್ಯ ಸಹಾಯಕರನ್ನು ಒಂದು ವಾರದೊಳಗೆ ನೇಮಕ ಮಾಡಲಾಗುತ್ತದೆ. ಕ್ಯಾದಗಿ ಹಾಗೂ ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳು ನೇಮಕವಾಗಿದ್ದು, ಒಂದೆರಡು ದಿನದಲ್ಲಿ ಅವರು ಸೇವೆಗೆ ಲಭ್ಯರಾಗುತ್ತಾರೆ.
ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತಪಟ್ಟ ಮೂವರು ಹಾಗೂ ಶುಕ್ರವಾರ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹರೀಶಕುಮಾರ ಹೇಳಿದರು.
ಎಸಿ ಡಾ. ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್ ಮಂಜುಳಾ ಭಜಂತ್ರಿ, ಕೆಎಫ್ಡಿ ವಿಶೇಷ ವ್ಯೆದ್ಯಾಧಿಕಾರಿ ಡಾ. ಸತೀಶ ಶೇಟ್,ಡಾ. ವಿನೋದ, ಡಾ. ಅಫಿಪಾ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ, ಆರ್ಎಫ್ಒ ಕಿರಣಕುಮಾರ, ಬಿಇಒ ಸದಾನಂದ ಸ್ವಾಮಿ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ತಾಪಂ ಇಒ ಪ್ರಶಾಂತರಾವ್ ಇತರರಿದ್ದರು.
EndFragment