ಮಂಗನ ಕಾಯಿಲೆ ಉಲ್ಬಣಗೊಳ್ಳುವ ಆತಂಕ

12sdp1
Published on

ಸಿದ್ದಾಪುರ: ಈಗ ಎಲ್ಲೆಡೆ ಕರೊನಾ ವೈರಸ್ ಮಹಾಮಾರಿ ಆರ್ಭಟ ಹೆಚ್ಚುತ್ತಿದ್ದರೆ, ಇತ್ತ ತಾಲೂಕಿನಲ್ಲಿ ಮಂಗನ ಕಾಯಿಲೆ(ಕೆಎಫ್​ಡಿ-ಕ್ಯಾಸನೂರ್ ಫಾರೆಸ್ಟ್ ಡಿಸಿಸ್) ಹೆಚ್ಚಾಗುವ ಆತಂಕ ಎದುರಾಗಿದೆ.

ತಾಲೂಕಿನ ಕ್ಯಾದಗಿ, ಕೊರ್ಲಕೈ, ಕಾನಸೂರು, ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಹರಡುತ್ತಿರುವುದು ಜನರಲ್ಲಿ ಭಯ ಮೂಡಿಸಿದೆ. ಮುಖ್ಯವಾಗಿ ದೊಡ್ಮನೆ ಹಾಗೂ ಕೊರ್ಲಕೈ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ಮಂಗನ ಕಾಯಿಲೆ ಕಾಣಿಕೊಂಡಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಗಡಿಭಾಗದಲ್ಲಿರುವ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜೋಗಿನಮಠದಲ್ಲಿ ನಾಲ್ಕು ವರ್ಷದ ಬಾಲಕನಿಗೆ ಈಗಾಗಲೇ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದರಿಂದ ಸುತ್ತ್ತನ ಜನತೆ ಭಯಗೊಂಡಿದ್ದಾರೆ. ಅದರಂತೆ ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಾದಲಮನೆಯ ಯುವತಿಗೆ ಹಾಗೂ ಸಂಪೇಸರದಲ್ಲಿ ಓರ್ವ ಮಹಿಳೆಗೆ ಕೆಎಫ್​ಡಿ ಖಚಿತವಾಗಿದೆ. ಮಂಗನ ಕಾಯಿಲೆ ಕಾಣಿಸಿಕೊಂಡಿರುವುದರಿಂದ ದೊಡ್ಮನೆ, ಕ್ಯಾದಗಿ, ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜನತೆ ತೋಟ ಗದ್ದೆಗಳಿಗೆ ಹೋಗುವುದಕ್ಕೂ ಮುಂದಾಗುತ್ತಿಲ್ಲ. ಮಳೆಗಾಲದ ಪೂರ್ವ ತಯಾರಿ ಮಾಡಿಕೊಳ್ಳುವುದಕ್ಕೆ ತೋಟದಲ್ಲಿ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ಒಂದೆಡೆ ಕರೊನಾ ಲಾಕ್​ಡೌನ್ ಪಾಲನೆಗೆ ಸರ್ಕಾರದ ಸೂಚನೆ, ಇನ್ನೊಂದೆಡೆ ಮಂಗನ ಕಾಯಿಲೆ ಭಯದಿಂದ ಮನೆಯಲ್ಲಿಯೇ ಜನತೆ ಕಾಲಕಳೆಯುವಂತಾಗಿದೆ.

23 ಜನರಿಗೆ ಮಂಗನ ಕಾಯಿಲೆ ಸೋಂಕು: ಈ ವರ್ಷ ತಾಲೂಕಿನಲ್ಲಿ ಈಗಾಗಲೇ 23 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 18 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಬ್ಬರು ಸಿದ್ದಾಪುರ ಸರ್ಕಾರಿ ಆಸ್ಪತ್ರೆ ಹಾಗೂ ಇನ್ನಿಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರೊನಾ ಹಾಗೂ ಮಂಗನ ಕಾಯಿಲೆ ಇವೆರಡನ್ನೂ ತಡೆಯಲು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಈಗಾಗಲೇ ಮನೆ ಮನೆ ಸಮೀಕ್ಷೆ 1ನೇ ಹಂತದಲ್ಲಿ ಮುಗಿದಿದೆ. ಎರಡನೇ ಹಂತದ ಸಮೀಕ್ಷೆ ನಡೆಸಲಾಗುತ್ತದೆ. ಮಂಗನ ಕಾಯಿಲೆ ತಡೆಯುವುದಕ್ಕೆ ಬೇಕಾಗುವ ಚುಚ್ಚು ಮದ್ದು ಹಾಗೂ ಡಿಎಂಪಿ ತೈಲ ತಾಲೂಕು ಆಸ್ಪತ್ರೆಯಲ್ಲಿ ಲಭ್ಯ ಇದೆ.| ಡಾ. ಲಕ್ಷ್ಮೀಕಾಂತ ನಾಯ್ಕ ತಾಲೂಕು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net