ಮಂಕಾದ ಮೈಸೂರು ಪ್ರವಾಸೋದ್ಯಮ!

DSC_6622
Published on

ಮಂಜುನಾಥ ಟಿ.ಭೋವಿ ಮೈಸೂರು

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಸೂರು ಪ್ರವಾಸೋದ್ಯಮಕ್ಕೆ ಬೂಸ್ಟರ್ ಟಾನಿಕ್ ನೀಡುವುದು ಹೇಗೆ? ಈ ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಈ ಪ್ರಮುಖ ಪ್ರಶ್ನೆಗೆ ಉತ್ತರ ಹುಡುವ ಪ್ರಯತ್ನವಾಗಬೇಕಿದೆ.


ಅಭ್ಯುದಯ ಕಂಡಿಲ್ಲ:
ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮೈಸೂರು ಜಾಗ ಪಡೆದುಕೊಂಡಿದೆ. ವಾರ್ಷಿಕವಾಗಿ ಆಗ್ರಾದ ತಾಜ್‌ಮಹಲ್‌ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಹೃದಯದಲ್ಲಿ ನೆಚ್ಚಿನ ಪ್ರೇಕ್ಷಣೀಯ ತಾಣವಾಗಿ ಸಾಂಸ್ಕೃತಿನ ನಗರಿ ಸ್ಥಾನ ಗಿಟ್ಟಿಸಿಕೊಂಡಿದೆ. ಆದಾಗ್ಯೂ, ನಿರೀಕ್ಷಿತ ಮಟ್ಟದಲ್ಲಿ ಸ್ಥಳೀಯ ಪ್ರವಾಸೋದ್ಯಮ ಅಭ್ಯುದಯ ಕಂಡಿಲ್ಲ ಎಂಬುದು ವಾಸ್ತವ.


ವರ್ಷವಿಡೀ ಗರಿಗೆದರಲಿ:
ದಸರಾವನ್ನು ನೂರಕ್ಕೆ ನೂರರಷ್ಟು ಸದ್ವಿನಿಯೋಗ ಮಾಡಿಕೊಂಡು, ಉಳಿದ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಬೂಸ್ಟರ್ ಟಾನಿಕ್ ನೀಡುತ್ತಲೇ ಸಾಗಬೇಕಿದೆ. ಅದಕ್ಕಾಗಿ ಬೇರೆ ಬೇರೆ ಚಟುವಟಿಕೆ ನಡೆಸುವ ಮೂಲಕ ಈ ಕ್ಷೇತ್ರಕ್ಕೆ ನಿತ್ಯ ನಿರಂತರವಾಗಿ ಹುರುಪು ತುಂಬಬೇಕಾಗಿದೆ. ಆಗ ಮಾತ್ರವೇ, ಬೀದಿಬದಿಯ ವ್ಯಾಪಾರದಿಂದ ಹಿಡಿದು ಪಂಚತಾರಾ ಹೋಟೆಲ್‌ವರೆಗೆ ಪ್ರವಾಸೋದ್ಯಮವನ್ನೇ ನಂಬಿರುವವರ ಆರ್ಥಿಕ ವಹಿವಾಟು ವರ್ಷವಿಡೀ ಗರಿಗೆದರಲು ಸಾಧ್ಯವಾಗಲಿದೆ.


ಎಲ್ಲರೂ ಕೈ ಜೋಡಿಸಬೇಕು:
ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ಅವರು ಈ ಅಂಶವನ್ನು ಮನಗಂಡು, ಮೈಸೂರಿನಲ್ಲಿ ಸಭೆ ನಡೆಸಿದಾಗಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಕೆಲವು ಸಲಹೆಗಳನ್ನೂ ನೀಡಿದ್ದ ಅವರು, ‘ದಸರಾ ಅವಧಿಯಲ್ಲಿ ಮಾತ್ರ ಪ್ರವಾಸಿ ಚಟುವಟಿಕೆಗಳು ಇರುತ್ತವೆ. ಉಳಿದ ದಿನಗಳಲ್ಲಿ ಏನೂ ಇರುವುದಿಲ್ಲ. ಇದು ಸರಿಯಲ್ಲ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಸಂಘ-ಸಂಸ್ಥೆಗಳು ಸೇರಿಕೊಂಡು ವರ್ಷವಿಡೀ ವಿವಿಧ ಚಟುವಟಿಕೆ ಕೈಗೊಳ್ಳಬೇಕು. ಇದಕ್ಕೆ ಸರ್ಕಾರ ನೆರವು ನೀಡಲಿದೆ’ ಎಂಬ ಭರವಸೆಯನ್ನೂ ನೀಡಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಈ ಕ್ಷೇತ್ರವನ್ನೇ ಅವಲಂಬಿಸಿರುವ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ.

ಮಾಗಿ ಉತ್ಸವ ಮಾಡಿ:
ಗೋವಾ ಪ್ರವಾಸೋದ್ಯಮದ ಮಾದರಿಯಲ್ಲಿ ಅದ್ದೂರಿಯಾಗಿ ಮಾಗಿ ಉತ್ಸವ ಆಚರಿಸಬೇಕು. ಹೊಸ ವರ್ಷಾಚರಣೆ ಅಂಗವಾಗಿ ಡಿಸೆಂಬರ್ ಅಂತ್ಯದಲ್ಲಿ ಅರಮನೆ ಅಂಗಳದಲ್ಲಿ ಆಯೋಜಿಸುತ್ತಿದ್ದ ಈ ಉತ್ಸವಕ್ಕೆ ಹೊಸ ರೂಪ ನೀಡಬೇಕು. ಕರೊನಾ ಕಾರಣಕ್ಕೆ ಎರಡು ವರ್ಷ ಇದು ನಡೆದಿಲ್ಲ. ಈ ಸಲ ಇದಕ್ಕೆ ಮರುಚಾಲನೆ ನೀಡುವ ಮೂಲಕ ಪ್ರವಾಸಿಗರನ್ನು ಸೆಳೆಯಬೇಕು.

ಮೈಸೂರಾಚೆಯೂ ಗಮನ ನೀಡಿ:
ಮೈಸೂರು ಪ್ರವಾಸೋದ್ಯಮವನ್ನು ಕೇವಲ ಮೈಸೂರು ನಗರಕ್ಕೆ ಸೀಮಿತಗೊಳಿಸಲಾಗಿದೆ. ಇದನ್ನು ತಪ್ಪಿಸಲು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಕಾಡಂಚಿನ ಕಬಿನಿ ಹಿನ್ನೀರು ಪ್ರದೇಶ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಜಾಗವಾಗಿದ್ದು, ಇಲ್ಲಿಗೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಇಲ್ಲಿನ ಹಸಿರು ಸಿರಿ, ನೀರಾಟವನ್ನು ಸವಿಯುತ್ತಾರೆ. ಇದಕ್ಕೆ ಇನ್ನಷ್ಟು ಉತ್ತೇಜನ ಮತ್ತು ಪ್ರಚಾರ ನೀಡಬೇಕಾಗಿದೆ.
ಜತೆಗೆ, ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಇನ್ನಷ್ಟು ರಂಗು ತುಂಬಬೇಕು. ಪುಣ್ಯಕ್ಷೇತ್ರ ತಲಕಾಡು ಪ್ರದೇಶವನ್ನು ಯಾತ್ರಾಸ್ಥಳವಾಗಿ ಪರಿವರ್ತನೆ ಮಾಡಬೇಕಾಗಿದೆ. ಹೀಗೆ ವಿವಿಧ ಪ್ರವಾಸ ತಾಣಗಳತ್ತ ಗಮನ ನೀಡಬೇಕಾಗಿದೆ.

ಸಲಹೆಗಳಿವು

  • ಸಂಜೆ ಹೊತ್ತಿನಲ್ಲಿ ಮನರಂಜನೆ ಕೊರತೆ ನಿವಾರಿಸಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ.
  • ವಿಶ್ವವಿಖ್ಯಾತ ಮೈಸೂರು ಅರಮನೆಗೆ ನಿತ್ಯ ಸಂಜೆ ಎರಡು ಗಂಟೆ ದೀಪಾಲಂಕಾರ.
  • ವಿದೇಶಗಳಲ್ಲಿ ಇರುವಂತೆ ಪ್ರವಾಸಿಗರು ಸೇರಲು ನಗರದಲ್ಲೂ ಹಾಟ್‌ಸ್ಪಾಟ್ ರೂಪಿಸುವುದು. ಇದಕ್ಕೆ ಅರಮನೆ ಹೊರ ಆವರಣ ಸೂಕ್ತ ಸ್ಥಳ.
  • ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಇನ್ನಿತರ ಹಳೆಯ ಪ್ರವಾಸಿ ತಾಣಗಳನ್ನು ಹೊರತುಪಡಿಸಿ ಹೊಸ ಪ್ರೇಕ್ಷಣೀಯ ಸ್ಥಳಗಳ ಸೃಷ್ಟಿ.
  • ಲಿಂಗಾಂಬುಧಿ ಕೆರೆಯ ಹಸಿರು ಉದ್ಯಾನ, ಬಟಾನಿಕಲ್ ಗಾರ್ಡನ್‌ಗೆ ಪ್ರಚಾರ ನೀಡಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ.
  • ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ ಕೆರೆಯನ್ನು ಪರಿಸರ ಸ್ನೇಹಿ ರೂಪದಲ್ಲಿ ಅಭಿವೃದ್ಧಿಪಡಿಸುವುದು.
  • * ಮೂರು ತಿಂಗಳು ಮಾತ್ರ ಬಳಕೆ ಆಗುವ ಕರ್ನಾಟಕ ವಸ್ತುಪ್ರದರ್ಶನ ಮೈದಾನದಲ್ಲಿ ವರ್ಷವಿಡೀ ವಸ್ತುಪ್ರದರ್ಶನದೊಂದಿಗೆ, ವಿವಿಧ ಚಟುವಟಿಕೆಗಳ ಆಯೋಜನೆ.

ಪ್ರವಾಸೋದ್ಯಮಕ್ಕೆ ಅನುಕೂಲ ಆಗುವ ರೀತಿಯಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಬೇಕಿದೆ. ಆದರೆ, ಸದ್ಯಕ್ಕೆ ಈ ರೀತಿಯ ಪ್ರಸ್ತಾವನೆ ಯಾವುದೂ ಇಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಯೋಚಿಸಲಾಗುವುದು. ಈ ಸಲವೂ ಡಿಸೆಂಬರ್‌ನಲ್ಲಿ ಮಾಗಿ ಉತ್ಸವ ಮಾಡುತ್ತಿಲ್ಲ.ಎಚ್.ಬಿ.ರಾಘವೇಂದ್ರ, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ದಸರಾ ಹೊರತಾಗಿಯೂ ಉಳಿದ ಅವಧಿಯಲ್ಲಿ ಪ್ರವಾಸಿ ಚಟುವಟಿಕೆ ಬಿರುಸುಗೊಳಿಸಬೇಕಾಗಿದ್ದು, ಸರ್ಕಾರ ನೆರವು ನೀಡಬೇಕಿದೆ. ಸ್ಥಳೀಯವಾಗಿ ಲಭ್ಯ ಇರುವ ಸಂಪನ್ಮೂಲವನ್ನು ಬಳಸಿಕೊಂಡು ಮೈಸೂರು ಪ್ರವಾಸೋದ್ಯಮವನ್ನು ಪ್ರವಾಸಿ ಸ್ನೇಹಿಯಾಗಿ ರೂಪಿಸಬೇಕಿದೆ. ಅದಕ್ಕಾಗಿ ಅಲ್ಪಾವಧಿ, ದೀರ್ಘಾವಧಿ ಯೋಜನೆ ಹಾಕಿಕೊಂಡು ಕಾರ್ಯಗತಗೊಳಿಸಬೇಕಾಗಿದೆ.ಸಿ. ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net