ಚಾಮರಾಜನಗರ: ಪ್ರತಿಯೊಬ್ಬ ಕನ್ನಡಿಗನ ಹೃದಯಕ್ಕೆ ಸಂತೋಷ ನೀಡುವ ಕನ್ನಡ ಧ್ವಜವನ್ನು ರೂಪಿಸಿದ ಮ. ರಾಮಮೂರ್ತಿ ಅವರಿಗೆ ಕನ್ನಡಿಗರು ಸದಾ ಕಾಲ ಚಿರಋಣಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ ಅವರ ಕೊಡುಗೆಗಳ ಕುರಿತು ಅವರು ಮಾತನಾಡಿದರು.
ಸ್ವಾತಂತ್ರ ಹೋರಾಟಗಾರರ ಕುಟುಂಬದಲ್ಲಿ ಜನಿಸಿ, ಬಾಲ್ಯದಲ್ಲಿಯೇ ತಂದೆಯ ವೀರ ಕೇಸರಿ ಪತ್ರಿಕೆ ಮೂಲಕ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ ಮ.ರಾಮಮೂರ್ತಿ ಅಪ್ರತಿಮ ಕನ್ನಡ ಹೋರಾಟಗಾರರು, ಪತ್ರಕರ್ತರು, ಕಾದಂಬರಿಕಾರರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು ಎಂದರು.
ಪರಿಷತ್ತಿನ ಹಿರಿಯ ಸದಸ್ಯೆ ಸರಸ್ವತಿ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಮಂಗಳವಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಉತ್ತಮ ಕೆಲಸ. ಕನ್ನಡಕ್ಕಾಗಿ ಹೋರಾಟ ನಡೆಸಿದ ಸರ್ವರನ್ನು ನೆನೆಯುವ ಕಾರ್ಯ ಕನ್ನಡಿಗರು ಮಾಡಬೇಕು ಎಂದರು.
ಪರಿಷತ್ತಿನ ಸದಸ್ಯ ಶಿವಲಿಂಗ ಮೂರ್ತಿ, ಬಿ.ಕೆ.ಆರಾಧ್ಯ, ರವಿಚಂದ್ರ ಪ್ರಸಾದ್, ಕುಸುಮ ಋಗ್ವೇದಿ, ರಾಮಸಮುದ್ರ ವೆಂಕಟೇಶ್ ಉಪಸ್ಥಿತರಿದ್ದರು.