ಮ.ಬೆಟ್ಟದಲ್ಲಿ ಮಹಾರಥೋತ್ಸವ ಸಂಭ್ರಮ

21 HANUR 1
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರೆ ಅಂಗವಾಗಿ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಈ ಮೂಲಕ ಮಹಾಶಿವರಾತ್ರಿ ಜಾತ್ರೆ ಸಂಪನ್ನಗೊಂಡಿತು.

ಬೆಳಗ್ಗೆ 8.20ರಿಂದ 9.10ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಮಹಾ ರಥೋತ್ಸವ ಜರುಗಿತು. ಇದಕ್ಕೂ ಮುನ್ನ ದೇಗುಲದಲ್ಲಿ ದೇವರಿಗೆ ಬೆಳಗಿನ ಜಾವ ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಬಳಿಕ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮೊದಲು ಬ್ರಹ್ಮದಾರದ ಪೂಜೆ ನೆರವೇರಿಸಿದರು. ತೇರಿನ ಸುತ್ತ ಪ್ರದಕ್ಷಿಣೆ ಹಾಕಿ ಅರಿಶಿನ ದಾರ ಕಟ್ಟಲಾಯಿತು. ಸಂಪ್ರದಾಯದಂತೆ ತಳಿಗೆ ಮನೆ ಪೂಜೆ ಮಾಡಲಾಯಿತು. ಬಳಿಕ ದೇವರಮೂರ್ತಿಯನ್ನು ಬಿಳಿಕುದುರೆ ವಾಹನದಲ್ಲಿ ಇರಿಸಿ ಛತ್ರಿ, ಚಾಮರ ಹಾಗೂ ಮಂಗಳವಾದ್ಯದೊಂದಿಗೆ ದೇಗುಲ ಹಾಗೂ ತೇರಿನ ಸುತ್ತಲು 3 ಬಾರಿ ಪ್ರದಕ್ಷಿಣೆ ಹಾಕಲಾಯಿತು.

ವಿವಿಧ ಪುಷ್ಪ, ತಳಿರು-ತೋರಣ ಹಾಗೂ ಬಣ್ಣಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿದ್ದ ತೇರಿನಲ್ಲಿರಿ ಮಹದೇಶ್ವರನ ಮೂರ್ತಿಯನ್ನು ಇರಿಸಿ ಸಾಲೂರು ಶ್ರೀಗಳ ಸಮ್ಮುಖದಲ್ಲಿ ಬಿಲ್ವಾರ್ಚನೆ, ಧೂಪ ಹಾಗೂ ಮಹಾಮಂಗಳಾರತಿ ನೆರವೇರಿಸಿ ಬೂದು ಕುಂಬಳಕಾಯಿ ಹೊಡೆದು ದೃಷ್ಟಿ ತೆಗೆಯಲಾಯಿತು. ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಬೆಳಗಿದ ನಂತರ 8.43ರಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ, ಸೂರಿಪಾನಿ, ಛತ್ರಿ, ಚಾಮರ, ನಂದಿಧ್ವಜಕಂಬ ಹಾಗೂ ಮಂಗಳವಾದ್ಯದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಭಕ್ತರು ಭಕ್ತಿಭಾವದಿಂದ ತೇರನ್ನು ಎಳೆದರು. ಭಕ್ತರು ಹಣ್ಣು ದವನ, ಧನ, ಧಾನ್ಯ ಎಸೆದರು. ಜೈ ಮಹತ್ ಮಲೆಯಾ, ಉಘೇ ಮಾದಪ್ಪ ಉಘೇ ಜಯಘೋಷ, ಹರ್ಷೋದ್ಗಾರ ಮುಗಿಲು ಮುಟ್ಟುವಂತಿತ್ತು. ರಥೋತ್ಸವ ಮುಗಿದ ಬಳಿಕ ನಿಂತಿದ್ದ ತೇರಿಗೆ ನೆರೆದಿದ್ದ ಭಕ್ತರು ನಮಿಸಿದರು.

ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್, ಎಸ್ಪಿ ಪದ್ಮಿನಿ ಸಹೋ, ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ, ಉಪ ಕಾರ್ಯದರ್ಶಿ ಬಸವರಾಜು, ದೇಗುಲದ ಪ್ರಧಾನ ಅರ್ಚಕ ಕರವೀರಸ್ವಾಮಿ, ಪಾರುಪತ್ತೆದಾರ ಮಲ್ಲಿಕಾರ್ಜುನಸ್ವಾಮಿ, ಸರಗೂರು ಮಹದೇವಸ್ವಾಮಿ ಹಾಗೂ ಇನ್ನಿತರರು ಇದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯೇಂದ್ರ ಸಿಎಂ ಆಗಲಿ: ರಥೋತ್ಸವದ ವೇಳೆ ಕೊಳ್ಳೇಗಾಲದ ನಾಗೇಂದ್ರ ಎಂಬುವವರು ತನ್ನ ಸ್ನೇಹಿತರ ಜತೆಗೂಡಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಿಎಂ ಆಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ತೇರಿಗೆ ಎಸೆದರು.

ಸಾಕಾನೆ ಭಾಗಿ: ರಥೋತ್ಸವದ ವೇಳೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹದೇಶ್ವರಬೆಟ್ಟದ ಸಾಕಾನೆ ಉಮಾ ಪಾಲ್ಗೊಂಡು ಎಲ್ಲರ ಗಮನ ಸೆಳೆಯಿತು. ಇದೇ ವೇಳೆ ಮೈಸೂರಿನ ವೀರಗಾಸೆ ತಂಡದ ಸದಸ್ಯರ ಕುಣಿತ ರಥೋತ್ಸವಕ್ಕೆ ಮೆರಗು ತಂದಿತು.

ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವದ ವೇಳೆ ದೇಗುಲದ ಮುಂಭಾಗದಲ್ಲಿ ಲಕ್ಷಾಂತರ ಭಕ್ತರು ನೆರೆದಿದ್ದರು. ವಾದ್ಯದ ತಾಳಕ್ಕೆ ಅಲ್ಲಲ್ಲಿ ಯುವಕರು ಕುಣಿಯಲು ಪ್ರಾರಂಭಿಸಿದರು. ಮಹಿಳೆಯರೂ ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು.

ಅನ್ನ ಬ್ರಹ್ಮೋತ್ಸವ: ರಥೋತ್ಸವ ಮುಗಿದ ಬಳಿಕ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯದಲ್ಲಿ ಸ್ವಾಮಿ ಮೂರ್ತಿಯನ್ನು ಟ್ರಾೃಕ್ಟರ್‌ನಲ್ಲಿ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಬಳಿಕ ಮೂರ್ತಿಯನ್ನು ದೇಗುಲಕ್ಕೆ ತಂದು ವಿಶೇಷ ಪೂಜೆ ನೆರವೇರಿಸುವ ಮೂಲಕ ಅನ್ನ ಬ್ರಹ್ಮೋತ್ಸವವನ್ನು ನೆರವೇರಿಸಲಾಯಿತು. ಈ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ದೇವರ ದರ್ಶನ: ಭಕ್ತರು ಅಂತರಗಂಗೆಯ ಬಳಿ ಪುಣ್ಯ ಸ್ನಾನ ಮಾಡಿ ಧೂಪ ಹಾಕಿ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರಲ್ಲದೇ ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವವಾಹನ ಉತ್ಸವದಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಕಡಲೆ, ಬೆಲ್ಲ ಹಂಚಿಕೆ: ಪಂಕ್ತಿಸೇವೆಯನ್ನು ಸೋಮವಾರ ನೆರವೇರಿಸಿದ್ದ ಭಕ್ತರು ಮಂಗಳವಾರ ಹುರಿಗಡಲೆ, ಕೊಬ್ಬರಿಕಾಯಿ ಹಾಗೂ ಬೆಲ್ಲ ಮಿಶ್ರಣ ಮಾಡಿ, ದೇಗುಲದ ಮುಂಭಾಗದಲ್ಲಿ ಪೂಜೆಯನ್ನು ಸಲ್ಲಿಸಿ ದೇಣಿಗೆ ನೀಡಿದ್ದ ಕುಟುಂಬಸ್ಥರಿಗೆ ಹಂಚಿದರು. ಇದು ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವ ಪದ್ಧತಿಯಾಗಿದೆ.

ಬಸ್‌ಗಾಗಿ ನೂಕು ನುಗ್ಗಲು: ರಥೋತ್ಸವ ಮುಗಿದ ಬಳಿಕ ಬಹುತೇಕ ಭಕ್ತರು ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಕೆಲವು ಕಡೆಗಳಿಗೆ ಹೆಚ್ಚಿನ ಬಸ್‌ಗಳಿರಲಿಲ್ಲ. ಇದರಿಂದ ಭಕ್ತರು ಕೊಳ್ಳೇಗಾಲದತ್ತ ತೆರಳುತ್ತಿದ್ದ ಬಸ್‌ಗಳಿಗೆ ಮುಗಿಬಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಬಸ್ ನಿಲ್ದಾಣದಲ್ಲಿಯೇ ಗಂಟೆಗಟ್ಟಲೇ ಕಾದು ತಮ್ಮ ಊರುಗಳಿಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net