ಚಾಮರಾಜನಗರ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಒತ್ತು ನೀಡಿ ಎಂದು ಪರಿಸರ ವಾರಿಯರ್ಸ್ ಗ್ರೂಪ್ ವತಿಯಿಂದ ಶನಿವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಪರಿಸರ ವಾರಿಯರ್ಸ್ ಗ್ರೂಪ್ ಸದಸ್ಯ ಮತ್ತು ಪರಿಸರ ಪ್ರೇಮಿ ಪಿ.ಮಂಜುನಾಥ್ ಮಾತನಾಡಿ, ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ವಾಹನ ಮತ್ತು ಪಾದಯಾತ್ರೆ ಮೂಲಕ ಆಗಮಿಸುತ್ತಾರೆ. ಪಾದಯಾತ್ರೆ ಭಕ್ತರಿಗೆ ಮಲೆ ಮಹದೇಶ್ವರ ಸ್ವಾಮಿ ಪ್ರಾಧಿಕಾರದ ವತಿಯಿಂದ ಉತ್ತಮ ನೀರಿನ ಸೌಲಭ್ಯ ಜಾರಿಗೆ ತರಬೇಕು. ನಿಗದಿತ ಸ್ಥಳಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಬೇಕು. ಪಾದಯಾತ್ರೆ ಭಕ್ತಾದಿಗಳು ಪ್ಲಾಸ್ಟಿಕ್ ಬದಲು ಪರ್ಯಾಯ ವಸ್ತುಗಳ ಬಳಕೆ ಮಾಡಬೇಕು. ಹೆಚ್ಚುವರಿ ಚೆಕ್ ಪೋಸ್ಟ್ ಗಳನ್ನು ತೆರೆಯುವ ಮೂಲಕ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮವಹಿಸಬೇಕು ಎಂದರು.
ಬೆಟ್ಟಕ್ಕೆ ಪಾದಯಾತ್ರೆ ಪ್ರಾರಂಭಿಸುವ ಮುನ್ನ, 1-2 ತಿಂಗಳ ಮುಂಚಿತವಾಗಿ ಮಾಧ್ಯಮಗಳಲ್ಲಿ ಪರ್ಯಾಯ ವಸ್ತುಗಳನ್ನು ತರುವಂತೆ ಹಾಗೂ ಪ್ಲಾಸ್ಟಿಕ್ ನಿಷೇಧ ಸಂಬಂಧ ಪ್ರಚಾರ ಮಾಡಬೇಕು. ಯಾವುದೇ ಒತ್ತಾಯಕ್ಕೆ ಮಣಿಯದೇ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮುಖಂಡ ಕೆಲ್ಲಂಬಳ್ಳಿ ಸೋಮ ನಾಯಕ, ರವಿ ನಾಯಕ, ಕೆ.ಆರ್.ಎಸ್ ಪಕ್ಷದ ಗಿರೀಶ್, ಸತೀಶ್, ಆಲೂರು ಮಲ್ಲು, ಚಿಂಗುಮಣಿ ಹಾಗೂ ಇತರರಿದ್ದರು.