ಮ.ಬೆಟ್ಟದಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗದಿರಲಿ

26 HANUR 3
Published on

ಹನೂರು: ಮಹದೇಶ್ವರಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಅನಧಿಕೃತ ಕಟ್ಟಡಗಳು ನಿರ್ಮಾಣವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸೂಚಿಸಿದರು.

ಮ.ಬೆಟ್ಟದ ನಾಗಮಲೆ ಭವನದಲ್ಲಿ ಬುಧವಾರ ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಆವರಣದಲ್ಲಿ ಗಡಿ ಗುರ್ತಿಸುವ ಸಂಬಂಧ ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಆವರಣದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಸೂಚಿಸಿದಂತೆ ಸರ್ವೇ ಕಾರ್ಯ ನಡೆಸಲಾಗಿದೆ. ನಿಖರ ಮಾಹಿತಿ ತಿಳಿದಿದೆ. ಆದ್ದರಿಂದ ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಲಾಡ್ಜ್ ಹಾಗೂ ಮನೆ ಕಟ್ಟಡ ನಿರ್ಮಾಣವಾಗಬಾರದು. ಇದು ಕಾನೂನಿನಡಿ ಅಪರಾಧ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಹಾಗೆಯೇ ಈಗಾಗಲೇ ಆರಂಭಿಸಿರುವ ಮ.ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿಸುವ ಸಲುವಾಗಿ ಕೈಗೊಂಡಿರುವ ಕಾರ್ಯವನ್ನು ಚುರುಕುಗೊಳಿಸಬೇಕು. ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸುಸಜ್ಜಿತ ದಾಸೋಹ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಮ.ಬೆಟ್ಟವನ್ನು ಮಾದರಿ ಕ್ಷೇತ್ರವಾಗಿಸುವ ಉದ್ದೇಶದಿಂದ ಈಗಾಗಲೇ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಅರಣ್ಯದಂಚಿನ ಗ್ರಾಮಗಳ ಸರ್ವೇ ಕಾರ್ಯ ನಡೆಸಿ ವರದಿ ನೀಡಬೇಕು ಎಂದು ತಿಳಿಸಿದರು. ಇದೇ ವೇಳೆ ಸರ್ವೇ ವರದಿಯನ್ನು ಪರಿಶೀಲಿಸಲಾಯಿತು.

ಬಳಿಕ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ ಶಾಸಕರು ಪರಿಶೀಲನೆಯನ್ನು ನಡೆಸಿ ಸುಸಜ್ಜಿತ ಶೌಚಗೃಹವನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಿಡಬ್ಲುೃಡಿ ವತಿಯಿಂದ 95 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಶೌಚಗೃಹ ಹಾಗೂ ಸ್ನಾನಗೃಹ ಕಾಮಗಾರಿಯ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.

ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಆರ್‌ಎಫ್‌ಒ ಅಮಿತ್, ಇನ್ಸ್‌ಪೆಕ್ಟರ್ ಜಗದೀಶ್, ಆರ್‌ಐ ಶಿವಕುಮಾರ್, ಪಿಡಿಒ ಕಿರಣ್ ಕುಮಾರ್, ಪಿಡಬ್ಲ್ಯುಡಿ ಎಇ ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net