

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಗುರುವಾರ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಬೇಡಗಂಪಣ ಸಮುದಾಯದ ವತಿಯಿಂದ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು.
ದೇಗುಲದಲ್ಲಿ ಬೆಳಗಿನ ಜಾವ ಎಂದಿನಂತೆ ಬೇಡಗಂಪಣ ಅರ್ಚಕರು ಸ್ವಾಮಿಯ ಲಿಂಗಮೂರ್ತಿಗೆ ವಿವಿಧ ಅಭಿಷೇಕ, ಬಿಲ್ವಾರ್ಚನೆ ಸೇವೆಯನ್ನು ನೆರವೇರಿಸಿದರು. ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ದೀಪ, ಧೂಪದಾರತಿ ಹಾಗೂ ಮಹಾ ಮಂಗಳಾರತಿಯನ್ನು ಬೆಳಗಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಬಳಿಕ 10.30 ರಿಂದ ಮಧ್ಯಾಹ್ನ 2ರವರೆಗೆ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡರಕಣ್ಣಪ್ಪ ವಂಶಸ್ಥರಾದ ಬೇಡಗಂಪಣ ಸಮುದಾಯದ ವತಿಯಿಂದ ಸ್ವಾಮಿಗೆ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು.
ಈ ವೇಳೆ ಮಾದಪ್ಪನಿಗೆ 101 ಮಜ್ಜನ ಸೇವೆ, ಭಸ್ಮಧಾರಣೆ, ಬಿಲ್ವಾರ್ಚನೆ ಹಾಗೂ ಎಳೆನೀರು, ಜೇನುತುಪ್ಪ, ಹಾಲು, ಮೊಸರು ಹಾಗೂ ಇನ್ನಿತರೆ ದ್ರವ್ಯಗಳಿಂದ ಅಭಿಷೇಕವನ್ನು ನೆರವೇರಿಸಲಾಯಿತು. ವಿಶೇಷವಾಗಿ ಸ್ವಾಮಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ನೈವೇದ್ಯ ಅರ್ಪಿಸಿಸಲಾಯಿತು. ಬಳಿಕ ಸ್ವಾಮಿಯ ಮೂರ್ತಿಗೆ ಚಿನ್ನದ ಕಿರೀಟ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿ ದೀಪ, ಧೂಪದಾರತಿ ಸೇವೆ ಹಾಗೂ ಮಹಾ ಮಂಗಳಾರತಿಯನ್ನು ಬೆಳಗಿಸುವುದರ ಮೂಲಕ ಮಾದಪ್ಪನಿಗೆ ಮಹಾ ರುದ್ರಾಭಿಷೇಕವನ್ನು ನೆರವೇರಿಸಲಾಯಿತು.
ಉತ್ಸವ ಮೂರ್ತಿಗಳ ಪ್ರದಕ್ಷಿಣೆ: ಮಹಾ ರುದ್ರಾಭಿಷೇಕದ ಮುಗಿದ ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ತುಂತುರು ಮಳೆಯ ನಡುವೆಯೇ ಸತ್ತಿಗೆ, ಸೂರಿಪಾನಿ, ನಂದಿಕಂಬ ಹಾಗೂ ಮಂಗಳ ವಾದ್ಯ ಮೇಳದೊಂದಿಗೆ ವಿವಿಧ ಪುಷ್ಪ ಹಾಗೂ ತಳೀರು ತೋರಣದಿಂದ ಸಿಂಗರಿಸಲಾಗಿದ್ದ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವ ವಾಹನಗಳನ್ನು ದೇಗುಲದ ಒಳಾಂಗಣದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ಹಾಗೂ ಬೇಡಗಂಪಣ ಸಮುದಾಯದ ಜನರು ದಂಡಿನ ಕೋಲನ್ನು ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಜಯಘೋಷಗಳನ್ನು ಮೊಳಗಿಸಿ ಭಕ್ತಿ ಮೆರೆದರು. ಬಳಿಕ ಭಕ್ತರಿಗೆ ನೈವೇದ್ಯದ ಪಂಚಾಮೃತವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಮಿಳುನಾಡಿನ ದ್ರೋಣಗಿರಿ ಮಠದ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಇದ್ದರು.